ಬೊಮ್ಮಾಯಿಗೆ ಅವರ ತಂದೆಯ ಪ್ರಭಾವಕ್ಕಿಂತ ಆರೆಸ್ಸೆಸ್ ಪ್ರಭಾವವೇ ಹೆಚ್ಚಾದಂತಿದೆ: ಸಿದ್ದರಾಮಯ್ಯ
ಬೆಂಗಳೂರು, ಮಾ. 7: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಯವ್ಯಯದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಆ ಎಲ್ಲ ನಿರೀಕ್ಷೆಗಳು ಹುಸಿಯಾಗಿದ್ದು, ಬಹಳ ಬೇಸರವಾಗಿದೆ. ಆರೆಸ್ಸೆಸ್ ನವರು ಇಂತಹ ಬಜೆಟ್ ಮಂಡಿಸಿದ್ದರೆ ನನಗೇನು ಬೇಸರ ಆಗುತ್ತಿರಲಿಲ್ಲ. ಎಸ್.ಆರ್.ಬೊಮ್ಮಾಯಿ ಅವರ ಪ್ರಭಾವ ಬಸವರಾಜ ಬೊಮ್ಮಾಯಿ ಮೇಲಿದೆ ಎಂದು ನಂಬಿದ್ದೆ. ಆದರೆ ಅವರ ತಂದೆಯ ಪ್ರಭಾವಕ್ಕಿಂತ ಆರೆಸೆಸ್ ಪ್ರಭಾವವೇ ಅವರ ಮೇಲೆ ಹೆಚ್ಚು ಬೀರಿರುವಂತೆ ಕಾಣುತ್ತಿದ್ದು, ಇಂದೊಂದು ಜನದ್ರೋಹಿ ಬಜೆಟ್ ಆಗಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಯಿತು. ಈ 3 ವರ್ಷಗಳ ಸಾಧನೆ ಏನು ಎಂದು ಬಜೆಟ್‍ನಲ್ಲಿ ಹೇಳಿಲ್ಲ. ಬಸವರಾಜ ಬೊಮ್ಮಾಯಿ ಅವರು ಹೊಸದಾಗಿ ಸಿಎಂ ಆಗಿರುವುದರಿಂದ ಹೊಸ ಆಶ್ವಾಸನೆಗಳ ಪಟ್ಟಿಯಂತೆ ಈ ಆಯವ್ಯಯ ಇದೆ' ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: ಆರೆಸ್ಸೆಸ್ ನಿಂದ ಬಂದ ಅಶೋಕ, ಈಶ್ವರಪ್ಪಗೆ ಸಿಎಂ ಸ್ಥಾನ ಸಿಕ್ಕಿಲ್ಲ: ಸಿದ್ದರಾಮಯ್ಯ
ಮಾಹಿತಿ ಮುಚ್ಚಿಟ್ಟರೆ ಸರ್ವಾಧಿಕಾರ: ‘ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಎರಡು ವರ್ಷ ಕೊರೋನ ಸೋಂಕು ಇದ್ದು, ತೆರಿಗೆ ಸಂಗ್ರಹ ಆಗಿಲ್ಲ ಎಂಬ ಕಾರಣಗಳನ್ನು ನೀಡಿ, ಇದಕ್ಕೆ ವಿತ್ತೀಯ ಹೊಣೆಗಾರಿಕೆ ನೀತಿಗೆ ತಿದ್ದುಪಡಿ ಮಾಡಬೇಕಾಯಿತು. ಸಾಲ ಹೆಚ್ಚು ಮಾಡಬೇಕಾಯಿತು ಎಂಬ ಸಬೂಬು ಹೇಳುತ್ತಿದೆ. ಇದನ್ನು ನಾನು ಒಪ್ಪುವುದಿಲ್ಲ. ಬಿಜೆಪಿ ತಾನು ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆಗಳು ಮತ್ತು ಅಧಿಕಾರಕ್ಕೆ ಬಂದ ನಂತರದ ಸಾಧನೆಗಳನ್ನು ಬಜೆಟ್ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಬೇಕಿತ್ತು. ರಾಜ್ಯದ ಜನರ ತೆರಿಗೆ ಹಣಕ್ಕೆ ನಾವು ಉತ್ತರದಾಯಿಗಳು. ಸರಕಾರ ಜನರಿಂದ ಮಾಹಿತಿ ಮುಚ್ಚಿಟ್ಟರೆ ಅದು ಸರ್ವಾಧಿಕಾರ, ಮಾಹಿತಿ ಬಿಚ್ಚಿಟ್ಟರೆ ಮಾತ್ರ ಅದು ಪ್ರಜಾಪ್ರಭುತ್ವ ಆಗುತ್ತದೆ' ಎಂದು ಸಿದ್ದರಾಮಯ್ಯ ಹೇಳಿದರು.
‘ನಾನು 13 ಬಜೆಟ್ ಮಂಡಿಸಿದ್ದು, ಸಿಎಂ ಆಗಿ ಆರು ಬಜೆಟ್ ಮಂಡಿಸಿದ್ದೇನೆ. ನಮ್ಮ ಸರಕಾರದ ಬಜೆಟ್ ಪುಸ್ತಕದಲ್ಲಿ ಪ್ರತಿ ಇಲಾಖೆಯಲ್ಲಿ ನಾವೇನು ಭರವಸೆ ನೀಡಿದ್ದೆವು, ಏನೆಲ್ಲಾ ಕಾರ್ಯಗತಗೊಳಿಸಿದ್ದೇವೆ ಮತ್ತು ಮುಂದೆ ಏನೆಲ್ಲಾ ಮಾಡುತ್ತೇವೆಂಬ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಆದರೆ ಯಡಿಯೂರಪ್ಪ ಸಿಎಂ ಆದ ಬಳಿಕ ಇಲಾಖಾವಾರು ಬದಲಿಗೆ ವಲಯವಾರು ಬಜೆಟ್ ಮಂಡನೆ ಆರಂಭ ಮಾಡಿದರು. ಅಂದಿನಿಂದ ಆರು ವಲಯಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಹಿತಿಯಿದೆ, ಇಲಾಖಾವಾರು ಮಾಹಿತಿ ಕಣ್ಮರೆಯಾಗಿದೆ. ಇದೆ ಪರಿಪಾಠವನ್ನು ಬಸವರಾಜ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗಿದ್ದಾರೆ' ಎಂದು ಸಿದ್ದರಾಮಯ್ಯ ಟೀಕಿಸಿದರು.
ಡಬ್ಬಾ ಸರಕಾರ: ‘ಬಿಜೆಪಿಯವರು ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷ ಆಡಳಿತಕ್ಕೆ ಬಂದರೆ ಡಬ್ಬಲ್ ಇಂಜಿನ್ ಸರಕಾರ ಬರುತ್ತೆ, ರಾಜ್ಯದಲ್ಲಿ ಸ್ವರ್ಗವೇ ಸೃಷ್ಟಿಯಾಗುತ್ತದೆ ಎಂದು ಬಣ್ಣದ ಮಾತುಗಳಾಡಿ ಜನರನ್ನು ನಂಬಿಸಿದ್ದರು. ಆದರೆ, ಇವರು ಮಂಡಿಸಿದ ಬಜೆಟ್ ನೋಡಿದ ಮೇಲೆ ಇದು ಡಬ್ಬಲ್ ಇಂಜಿನ್ ಸರಕಾರ ಅಲ್ಲ ‘ಡಬ್ಬಾ ಸರಕಾರ ಎಂದನಿಸುತ್ತಿದೆ. ಇದು ಅಭಿವೃದ್ದಿ ಮತ್ತು ಬೆಳವಣಿಗೆಗೆ ಪೂರಕವಲ್ಲ, ಯಾವುದೇ ಮುನ್ನೋಟವೂ ಇಲ್ಲದ ಬಜೆಟ್ ಆಗಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಸಾಲ ಮಾಡಿ ಹೋಳಿಗೆ ತಿಂದಂತೆ: ‘2022-23ನೆ ಸಾಲಿನ ಬಜೆಟ್ ಗಾತ್ರ 2,65,270 ಕೋಟಿ ರೂ., ಇದೇ ಸಾಲಿಗೆ ರಾಜಸ್ವ ಕೊರತೆ 14,699 ಕೋಟಿ ರೂ.ಗಳಾಗಿದೆ. ‘ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ನೀತಿ ಅನುಮೋದನೆ ಆಗಿದ್ದು, ಮುಖ್ಯವಾಗಿ ವಿತ್ತೀಯ ಕೊರತೆ ಶೇ.3ಕ್ಕಿಂತ ಕಡಿಮೆ ಇರಬೇಕು, ರಾಜಸ್ವ ಉಳಿಕೆ ಇರಬೇಕು ಮತ್ತು ಸಾಲ ಜಿಎಸ್‍ಡಿಪಿಯ ಶೇ.25ರಷ್ಟನ್ನು ಮೀರುವಂತಿಲ್ಲ' ಎಂಬ ನಿಯಮಗಳಿವೆ. ನಾನು ಮಂಡಿಸಿದ ಬಜೆಟ್‍ನಲ್ಲಿ ಒಮ್ಮೆಯೂ ರಾಜಸ್ವ ಕೊರತೆ ಇಲ್ಲದೆ ಆರ್ಥಿಕ ಶಿಸ್ತನ್ನು ಪಾಲನೆ ಮಾಡಿದ್ದೆ. ಈಗ ರಾಜಸ್ವ ಕೊರತೆಯ ಬಜೆಟ್ ಮಂಡಿಸಿದ್ದಾರೆ, ಈ ಕೊರತೆಯಾದ ಹಣವನ್ನು ಸಾಲದ ಮೂಲಕ ತೀರಿಸಬೇಕು. ಅಂದರೆ ಇದು ಸಾಲ ಮಾಡಿ ಹೋಳಿಗೆ ತಿಂದಂತಾಗುತ್ತದೆ' ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಾಲದ ಹೆಚ್ಚಳ: ಸ್ವಾತಂತ್ರ್ಯ ಬಂದ ನಂತರದಿಂದ 2018ರಲ್ಲಿ ನಮ್ಮ ಸರಕಾರದ ಕೊನೆಯ ಬಜೆಟ್ ಮಂಡಿಸುವವರೆಗೆ ಇದ್ದ ಒಟ್ಟು ಸಾಲ 2,42,000 ಕೋಟಿ ರೂ., ಬಜೆಟ್ ಪುಸ್ತಕದಲ್ಲಿ ಹೇಳಿರುವಂತೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ರಾಜ್ಯದ ಒಟ್ಟು ಸಾಲ 5,18,366 ಕೋಟಿ ರೂ.ಗಳಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ 3 ವರ್ಷಗಳಲ್ಲಿ ಸುಮಾರು 2,64,368 ಕೋಟಿ ರೂ.ಸಾಲ ಮಾಡಿದ್ದಾರೆ. ಈ ಸಾಲಕ್ಕೆ ಬಡ್ಡಿ ರೂಪದಲ್ಲೇ ಈ ವರ್ಷ 27 ಸಾವಿರ ಕೋಟಿ ರೂ.ಗೂ ಅಧಿಕ ಹಣ ಪಾವತಿ ಮಾಡಬೇಕಿದೆ. ಮುಂದಿನ ವರ್ಷ ಇದು 29,397 ಕೋಟಿ ರೂ.ಗಳಾಗಲಿದೆ. ಇದರ ಜೊತೆಗೆ 14 ಸಾವಿರ ಕೋಟಿ ರೂ.ಅಸಲು ಪಾವತಿಸಬೇಕು. ವರ್ಷವೊಂದಕ್ಕೆ ಅಸಲು ಮತ್ತು ಬಡ್ಡಿ ರೂಪದಲ್ಲಿ 43ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣ ಪಾವತಿಸಬೇಕು. ಇದೇ ರೀತಿ ಮುಂದುವರೆದರೆ 2025-26ನೆ ಸಾಲಿಗೆ ಬಡ್ಡಿ ರೂಪದಲ್ಲೇ 42,789 ಕೋಟಿ ರೂ.ಪಾವತಿ ಮಾಡಬೇಕು' ಎಂದು ಸಿದ್ದರಾಮಯ್ಯ ಅಂಕಿ-ಸಂಖ್ಯೆಗಳನ್ನು ವಿವರಿಸಿದರು.
‘ಸಾಲ ಹೆಚ್ಚಾಗಲು ಕೊರೋನ ಸೋಂಕು ಮತ್ತು ಲಾಕ್‍ಡೌನ್ ಕಾರಣ ಎಂದು ಹೇಳುತ್ತದೆ. ಆದರೆ, ಕೋವಿಡ್ ನಿರ್ವಹಣೆಗೆ ಎರಡು ವರ್ಷ ಒಟ್ಟು ಸುಮಾರು 8 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಕೇಂದ್ರ ಸರಕಾರ ತಾನು ಕೊಡಬೇಕಾಗಿರುವ ಹಣವನ್ನು ಸರಿಯಾಗಿ ಕೊಡದೆ ಇರುವ ಕಾರಣಕ್ಕೆ ರಾಜ್ಯಗಳ ಜಿಎಸ್‍ಡಿಪಿಯ ಶೇ.25ರಷ್ಟಕ್ಕಿಂತ ಶೇ.2ರಷ್ಟು ಹೆಚ್ಚು ಸಾಲ ಮಾಡಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಬಾರಿ ಸರಕಾರದ ಬದ್ಧತಾ ವೆಚ್ಚ ಶೇ.102ರಷ್ಟಿತ್ತು, ಅದನ್ನು ನಾನು ಟೀಕಿಸಿದ್ದೆ. ಹಾಗಾಗಿ ಈ ಬಾರಿ ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಯೋಜನೆ ಆಧಾರಿತ ಬದ್ಧ ವೆಚ್ಚ ಮತ್ತು ರಾಜಸ್ವ ಸ್ವೀಕೃತಿಗಳ ಅನುಪಾತವಾಗಿ ಯೋಜನೆ ಆಧಾರಿತವಲ್ಲದ ಬದ್ಧ ವೆಚ್ಚ ಎಂದು ಎರಡು ಭಾಗ ಮಾಡಿ ಲೆಕ್ಕವೇ ಸಿಗದಂತೆ ಗೊಂದಲಮಯ ಮಾಡಲಾಗಿದೆ' ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.