ಮೈಸೂರಿನಲ್ಲಿ ಕ್ಲೋರಿನ್ ಅನಿಲ ಸೋರಿಕೆ: 20ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಮೈಸೂರು,ಮಾ.7: ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಕ್ಲೋರಿನ್ ಘಟಕದಲ್ಲಿ ಅನಿಲ ಸೋರಿಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಸೋಮವಾರ ಸಂಜೆ 4 ಗಂಟೆ ವೇಳೆಗೆ ಅನಿಲ ಸೋರಿಕೆಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ರೈಲ್ವೆ ಆಸ್ಪತ್ರೆ ಸೇರಿದ್ದಾರೆ. ತಕ್ಷಣ ಎಚ್ಚೆತ್ತಿಕೊಂಡ ಅಧಿಕಾರಿಗಳು ಜೆಎಲ್‍ಬಿ ರಸ್ತೆಯಿಂದ ಒಂಟಿಕೊಪ್ಪಲ್‍ಗೆ ಹೋಗುವ ಮಾರ್ಗ ಹಾಗೂ ವೆಂಕಟೇಶ್ವರ ದೇವಸ್ಥಾನದ ರಸ್ತೆಯನ್ನು ಬಂದ್ ಮಾಡಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ.
ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ಅನಿಲ ಸೋರಿಕೆಯಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ 20ಕ್ಕೂ ಹೆಚ್ಚು ಕಾರ್ಮಿಕರು, ಅಕ್ಕ ಪಕ್ಕದಲ್ಲಿಯೇ ಇರುವ ರೈಲ್ವೆ ಕ್ವಾರ್ಟಸ್‍ನ ನಿವಾಸಿಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಣಿ ವಿಲಾಸ ನೀರು ಸರಬರಾಜು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದವರಿಗೂ ಅನಿಲ ಸೋರಿಕೆಯಿಂದ ಸಮಸ್ಯೆ ಉಂಟಾಗಿದ್ದು, ಅವರ ರಕ್ಷಣೆಯನ್ನೂ ಮಾಡಲಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಆಂಬುಲೆನ್ಸ್, ರೈಲ್ವೆ ಪೊಲೀಸರು ಇದ್ದು ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.