ಕಳಸದಲ್ಲಿ 6ನೇ ದಿನಕ್ಕೆ ಕಾಲಿಟ್ಟ ಅತಿವೃಷ್ಟಿ ಸಂತ್ರಸ್ತರ ಧರಣಿ: ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಮಹಿಳೆ ಆಸ್ಥಸ್ಥ

Update: 2022-03-07 15:03 GMT

ಚಿಕ್ಕಮಗಳೂರು, ಮಾ.7: ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ನಿವೇಶನ, ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಕಳೆದೊಂದು ವಾರದಿಂದ ಜಿಲ್ಲೆಯ ಕಳಸ ಪಟ್ಟಣದ ನಾಡಕಚೇರಿ ಎದುರು ವಿವಿಧ ಸಂಘಸಂಸ್ಥೆಗಳ ಬೆಂಬಲದೊಂದಿಗೆ ಆರಂಭಿಸಿರುವ ಅನಿರ್ಧಿಷ್ಟಾವಧಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ರವಿವಾರದಿಂದ ಸಂತ್ರಸ್ತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಉಪವಾಸಕೈಗೊಂಡಿದ್ದವರ ಪೈಕಿ ಮಹಿಳೆಯೋರ್ವರು ಸೋಮವಾರ ಆಸ್ಪತ್ರೆ ಸೇರಿರುವ ಘಟನೆ ನಡೆಯಿತು.

ಕಳೆದ ಮೂರು ವರ್ಷಗಳ ಹಿಂದೆ ಕಳಸ ತಾಲೂಕು ವ್ಯಾಪ್ತಿಯ ಚೆನ್ನಡ್ಲು ಗ್ರಾಮ ಸೇರಿದಂತೆ ಹಲವೆಡೆ ಅತಿವೃಷ್ಟಿಯಿಂದ ಸಂಭವಿಸಿದ ಭೂ ಕುಸಿತಕ್ಕೆ ಹಲವಾರು ಮನೆಗಳು ನೆಲಸಮಗೊಂಡಿದ್ದವು. ಹೀಗೆ ನೆಲಸಮಗೊಂಡ ಮನೆಗಳ ಮಾಲಕರಿಗೆ ಕಳಸ ಸಮೀಪದ ಕುಂಬಳಡಿಕೆ ಎಂಬಲ್ಲಿ ನಿವೇಶನ ಒದಗಿಸಲು ಜಾಗ ಗುರುತಿಸಿದೆಯಾದರೂ ಮೂರು ವರ್ಷಗಳಿಂದ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ವಿತರಣೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿಲ್ಲ. ಅಲ್ಲದೇ 3 ವರ್ಷಗಳಿಂದ ಬಾಡಿಗೆ ಹಣವನ್ನೂ ನೀಡಿಲ್ಲ ಎಂದು ಆರೋಪಿಸಿದ್ದ ಸಂತ್ರಸ್ತರು ಕಳೆದ 6 ದಿನಗಳ ಹಿಂದೆ ಕಳಸ ಪಟ್ಟಣದಲ್ಲಿ ಸಮಾಜಿಕ ಕಾರ್ಯಕರ್ತ ರವಿ ರೈ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದರು.

ಕಳೆದ 2 ವರ್ಷಗಳ ಹಿಂದೆಯೇ ಜಿಲ್ಲಾಡಳಿತ ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ನೀಡಲು ಜಾಗ ಗುರುತಿಸಿದ್ದರೂ ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ. ಕಳಸ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿ ರಮೇಶ್ ಅವರು, 16 ಸಂತ್ರಸ್ತರಿಗೆ ಒಂದು ವಾರದಲ್ಲಿ ನಿವೇಶನ ಹಾಗೂ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ 10 ದಿನ ಕಳೆದರೂ ನಿವೇಶನ, ಹಕ್ಕುಪತ್ರ ನೀಡಲು ಮುಂದಾಗಿಲ್ಲ. ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರೂ ಈ ಸಂಬಂಧ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಧರಣಿ ಆರಂಭಿಸಿದ್ದ ಸಂತ್ರಸ್ತರು 3 ದಿನಗಳ ಕಾಲ ಅನಿರ್ಧಿಷ್ಟಾವಧಿ ಹೋರಾಟ ಕೈಗೊಂಡಿದ್ದರು. ಈ ಹೋರಾಟಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ರವಿವಾರದಿಂದ ಸಂತ್ರಸ್ತರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. 

ಸಂತ್ರಸ್ತರ ಹೋರಾಟಕ್ಕೆ ಕಳಸ ತಾಲೂಕು ವ್ಯಾಪ್ತಿಯ ಸಾರ್ವಜನಿಕರೂ ಸೇರಿದಂತೆ ಜೆಡಿಎಸ್, ಕಾಂಗ್ರೆಸ್, ಸಿಪಿಐ ಪಕ್ಷದ ಮುಖಂಡರು, ಕಾರ್ಯಕರ್ತರು ವ್ಯಾಪಕ ಬೆಂಬಲ ನೀಡಿದ್ದು, ಸೋಮವಾರ ಉಪವಾಸ ಧರಣಿ ನಿರತರಾಗಿದ್ದ ಸಂತ್ರಸ್ತರ ಪೈಕಿ ಮಹಿಳೆಯೋರ್ವರು ಅಸ್ಪಸ್ಥರಾಗಿ ಕುಸಿದುಬಿದ್ದ ಘಟನೆ ನಡೆಯಿತು. ಕೂಡಲೇ ಸ್ಥಳದಲ್ಲಿದ್ದವರು ಸಮೀಪದಲ್ಲೇ ಇದ್ದ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿರುವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಮಂಗಳವಾರವೂ ಸಂತ್ರಸ್ತರ ಉಪವಾಸ ಸತ್ಯಾಗ್ರಹ ಮುಂದುವರಿಯಲಿದ್ದು, ಈ ವೇಳೆ ಸಂತ್ರಸ್ತರ ಪ್ರಾಣಕ್ಕೆ ಕುತ್ತಾದಲ್ಲಿ ಜಿಲ್ಲಾಡಳಿತವೇ ಹೊಣೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಸಂತ್ರಸ್ತರ ಬೇಡಿಕೆ ಈಡೇರಿಸುವಲ್ಲಿ ನಿರ್ಲಕ್ಷ್ಯವಹಿಸಿರುವ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News