×
Ad

ಕಬ್ಬಿನಾಲೆ ವಸಂತ ಭಾರದ್ವಾಜ್ ಸೇರಿ 18 ಜನರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ

Update: 2022-03-07 22:24 IST
ಕಬ್ಬಿನಾಲೆ ವಸಂತ ಭಾರದ್ವಾಜ್ 

ಬೆಂಗಳೂರು, ಮಾ.7: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ನೀಡುವ 2021ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಿ ಪ್ರಕಟಿಸಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ಕಾರ್ಕಳದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಡೆಮಿ ಪ್ರಕಟನೆಯಲ್ಲಿ ತಿಳಿಸಿದೆ. 

ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2021ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ತೆಂಕುತಿಟ್ಟು ಯಕ್ಷಗಾನ ಪ್ರಸಂಗಕರ್ತ, ಸಾಹಿತಿ ಹಾಗೂ ಕಲಾವಿದ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1 ಲಕ್ಷ ರೂ. ನಗದು, ಫಲಕ ಹಾಗೂ ಪ್ರಮಾಣಪತ್ರವನ್ನು ಹೊಂದಿದೆ.

ಗೌರವ ಪ್ರಶಸ್ತಿಗೆ ಸಂಪೂರ್ಣ ಯಕ್ಷಗಾನ ಕಲಾವಿದ ಸತ್ಯನಾರಾಯಣ ವರದ ಹಾಸ್ಯಗಾರ(ಕರ್ಕಿ), ಮುತ್ತಪ್ಪ ತನಿಯ ಪೂಜಾರಿ(ಹೊರನಾಡು ಕನ್ನಡಿಗ), ತೆಂಕುತಿಟ್ಟು ಯಕ್ಷಗಾನ ಗುರು ನರೇಂದ್ರಕುಮಾರ್ ಜೈನ್(ಉಜಿರೆ), ಭಾಗವತಿಕೆ ಮತ್ತು ಮುಖವೀಣೆ ಕಲಾವಿದ ಮೂಡಲಗಿರಿಯಪ್ಪ ಹಾಗೂ ಭಾಗವತ ಮತ್ತು ಮೂಡಲಪಾಯ ಕಲಾವಿದ ಎನ್.ಟಿ.ಮೂರ್ತಾಚಾರ್ಯ ಇವರನ್ನು ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು, ಫಲಕ ಮತ್ತು ಪ್ರಮಾಣ ಪತ್ರವನ್ನು ಹೊಂದಿದೆ.

ಯಕ್ಷಸಿರಿ ಪ್ರಶಸ್ತಿಗೆ ಬಡಗುತಿಟ್ಟು ಕಲಾವಿದರಾದ ಕುಂದಾಪುರದ ಹಳ್ಳಾಡಿ ಜಯರಾಮ ಶೆಟ್ಟಿ, ಉಡುಪಿಯ ಗೋಪಾಲ ಗಾಣಿಗ ಆಜ್ರಿ, ಚಿಕ್ಕಮಗಳೂರಿನ ಸೀತೂರು ಅನಂತಪದ್ಮನಾಭ ರಾವ್, ಹೊನ್ನಾವರದ ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತ, ತೆಂಕುತಿಟ್ಟು ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ(ಮಂಗಳೂರು), ಕಾಸರಗೋಡಿನ ರಾಮ ಸಾಲಿಯಾನ್ ಮಂಗಲ್ಪಾಡಿ, ಕೊಕ್ಕಡ ಈಶ್ವರ ಭಟ್, ಸಂಪೂರ್ಣ ಯಕ್ಷಗಾನ ಕಲಾವಿದ ಅಡಿಗೋಣ ಬೀರಣ್ಣ ನಾಯ್ಕ, ಮೂಡಲಪಾಯ ಯಕ್ಷಗಾನ ಕಲಾವಿದ ಭದ್ರಯ್ಯ, ಕೇಳಿಕೆ ಕಲಾವಿದ ಬಸವರಾಜಪ್ಪ(ಕೋಲಾರ) ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.

ಕಾಸರಗೋಡಿನ ಕೆ.ರಮಾನಂದ ಬನಾರಿ ಅವರ ‘ಅರ್ಥಾಯನ’ ಹಾಗೂ ಮೈಸೂರಿನ ಎಚ್.ಆರ್.ಚೇತನ ಅವರ ‘ಮೂಡಲಪಾಯ ಯಕ್ಷಗಾನ’ ಕೃತಿಗಳು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದು, ಇವರಿಗೆ ತಲಾ 25 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News