×
Ad

ನೋಟು ಅಮಾನ್ಯೀಕರಣ-ಜಿಎಸ್‍ಟಿ ಜಾರಿಯಿಂದ ರಾಜ್ಯಕ್ಕೆ 2.96 ಲಕ್ಷ ಕೋಟಿ ರೂ.ನಷ್ಟ: ಸಿದ್ದರಾಮಯ್ಯ

Update: 2022-03-07 22:27 IST

ಬೆಂಗಳೂರು, ಮಾ.7: ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಜನ ಉದ್ಯೋಗಿಗಳು ಇದ್ದರು. ನೋಟು ಅಮಾನ್ಯೀಕರಣ, ಜಿಎಸ್‍ಟಿ ಜಾರಿ ಹಾಗೂ ಕೊರೋನ ಆರ್ಭಟದ ನಂತರ ಈ ಕೈಗಾರಿಕೆಗಳು ಸ್ಥಗಿತಗೊಂಡು ಇಂದು ಕೇವಲ 2.5 ರಿಂದ 3 ಕೋಟಿ ಉದ್ಯೋಗಗಳು ಉಳಿದಿವೆ. ಅಲ್ಲದೆ, ನಮ್ಮ ರಾಜ್ಯಕ್ಕೆ ಸುಮಾರು 2,96,655 ಕೋಟಿ ರೂ. ನಷ್ಟವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಭೋಜನಾ ವಿರಾಮದ ಬಳಿಕ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತು ಮುಂದುವರೆಸಿದ ಅವರು, ಕೃಷಿ ಮತ್ತು ಸಣ್ಣ ಕೈಗಾರಿಕೆಗಳು ದೇಶದ ಪ್ರಮುಖ ಉದ್ಯೋಗ ನೀಡುವ ಕ್ಷೇತ್ರಗಳು. ಇಂದು ಈ ಕ್ಷೇತ್ರಗಳೇ ಸಂಕಷ್ಟದಲ್ಲಿವೆ. ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನಿರುದ್ಯೋಗ ದರ ಏರಿಕೆಯಾಗಿದೆ. ನಿರುದ್ಯೋಗ ಹೆಚ್ಚಾಗುವುದರಿಂದ ರಾಜ್ಯದ ಜಿಡಿಪಿ ಕುಸಿತವಾಗುತ್ತದೆ, ಇದರಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡಲು ಆಗಲ್ಲ ಎಂದರು.

ರಾಜ್ಯದ ಆರ್ಥಿಕ ಹಿನ್ನೆಡೆಗಿರುವ ಹಲವು ಕಾರಣಗಳಲ್ಲಿ ಕೊರೋನ ಕೂಡ ಒಂದು. ಆದರೆ ಅದೊಂದೇ ಕಾರಣವಲ್ಲ, ಬಹಳ ಮುಖ್ಯವಾಗಿ ಕೇಂದ್ರ ಸರಕಾರದಿಂದ ನಮಗೆ ಬರಬೇಕಿದ್ದ ತೆರಿಗೆ ಪಾಲು ಮತ್ತು ಅನುದಾನದ ಪಾಲು ಕಡಿಮೆಯಾಗಿದ್ದರಿಂದ ರಾಜಸ್ವ ಸ್ವೀಕೃತಿ ಕಡಿಮೆಯಾಯಿತು. ಇದರಿಂದ ರಾಜಸ್ವ ಕೊರತೆ ಉಂಟಾಗಿದೆ ಎಂದು ಅವರು ಹೇಳಿದರು.

2012-13 ರಲ್ಲಿ ರೂ. 12,647 ಕೋಟಿ, 2013-14 ರಲ್ಲಿ ರೂ. 13,894 ಕೋಟಿ, 2014-15 ರಲ್ಲಿ ರೂ. 14,654 ಕೋಟಿ, 2015-16 ರಲ್ಲಿ ರೂ. 23,983 ಕೋಟಿ, 2017-18 ರಲ್ಲಿ ರೂ. 31,752 ಕೋಟಿ, 2018-19 ರಲ್ಲಿ ರೂ. 35,895 ಕೋಟಿ, 2019-20ರ ಬಜೆಟ್‍ನಲ್ಲಿ ಅಂದಾಜಿಸಿದ್ದು ರೂ.39,806 ಕೋಟಿ, ಆದರೆ ಬಂದಿದ್ದು ರೂ. 30,919 ಕೋಟಿ, 2020-21 ರಲ್ಲಿ ರೂ. 28,000 ಕೋಟಿ ಬಜೆಟ್ ಅಂದಾಜು, ಆದರೆ ಬಂದಿದ್ದು ರೂ. 21,495 ಕೋಟಿ ಎಂದು ಅವರು ತಿಳಿಸಿದರು. 

2021-22ಕ್ಕೆ ರೂ. 27,145 ಕೋಟಿ ಬರಲಿದೆ ಎಂದು ಪರಿಷ್ಕøತ ವರದಿಯಲ್ಲಿ ಅಂದಾಜಿಸಲಾಗಿದೆ, ಆದರೆ ಕಳೆದ ಡಿಸೆಂಬರ್ ಕೊನೆ ವಾರದ ವರೆಗೆ ಬಂದಿರುವುದು ಕೇವಲ ರೂ. 16,000 ಕೋಟಿ. ಇನ್ನುಳಿದ ಪಾಲು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಮುಂದಿನ ವರ್ಷ ರೂ. 29,793 ಕೋಟಿ ತೆರಿಗೆ ಪಾಲು ಬರಲಿದೆ ಎಂದು ಅಂದಾಜಿಸಲಾಗಿದೆ. 2013-14 ರಲ್ಲಿ ಕೇಂದ್ರ ಸರಕಾರದ ಬಜೆಟ್ ಗಾತ್ರ ರೂ.16 ಲಕ್ಷದ 06 ಸಾವಿರ ಕೋಟಿ ಇತ್ತು, ಈಗಿನ ಬಜೆಟ್ ಗಾತ್ರ ರೂ.39 ಲಕ್ಷದ 45 ಸಾವಿರ ಕೋಟಿಗೆ ಹೆಚ್ಚಾಗಿದೆ. ಆದರೆ ರಾಜ್ಯದ ತೆರಿಗೆ ಪಾಲಿನ ಏರಿಕೆ ಎಷ್ಟಾಗಿದೆ? ಎಂದು ಅವರು ಪ್ರಶ್ನಿಸಿದರು.

ಜಿಎಸ್‍ಟಿ ಬರುವ ಮೊದಲು ರಾಜ್ಯದ ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ.13 ರಿಂದ 14 ಇತ್ತು, ಈ ನಷ್ಟವನ್ನು ಕೇಂದ್ರ ಸರಕಾರ ಭರಿಸಿ ಕೊಡಬೇಕಲ್ವ? 14 ಮತ್ತು 15ನೇ ಹಣಕಾಸು ಆಯೋಗದ ವರದಿಗಳ ನಡುವೆ ನಮ್ಮ ರಾಜ್ಯದ ತೆರಿಗೆ ಪಾಲು 1.07ರಷ್ಟು ಕಡಿಮೆಯಾಯಿತು. ಆಂದ್ರಪ್ರದೇಶ 0.26, ಅಸ್ಸಾಂ 0.18, ಕೇರಳ 0.58 ಕಡಿಮೆಯಾಗಿದೆ. ಈ ಎಲ್ಲ ರಾಜ್ಯಗಳಲ್ಲಿ ಹೆಚ್ಚು ನಷ್ಟವಾಗಿರುವುದು ಕರ್ನಾಟಕಕ್ಕೆ. ಇದೇ ಕಾರಣಕ್ಕೆ 15ನೇ ಹಣಕಾಸು ಆಯೋಗ ಮಧ್ಯಂತರ ವರದಿಯಲ್ಲಿ ನಮ್ಮ ರಾಜ್ಯಕ್ಕೆ 5,495 ಕೋಟಿ ರೂ.ವಿಶೇಷ ಅನುದಾನ ಶಿಫಾರಸು ಮಾಡಿತ್ತು, ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕಾರ ಮಾಡಿದ್ದರಿಂದ ಇಷ್ಟು ದೊಡ್ಡ ಅನುದಾನ ರಾಜ್ಯದ ಕೈತಪ್ಪಿ ಹೋಯಿತು ಎಂದು ಅವರು ದೂರಿದರು. 

ಈ ವರ್ಷದ ಜೂನ್ 30ಕ್ಕೆ ಜಿಎಸ್‍ಟಿ ಪರಿಹಾರ ಬರುವುದು ಕೂಡ ಕೊನೆಯಾಗಲಿದೆ. ಇದರಿಂದ ವರ್ಷಕ್ಕೆ ಕನಿಷ್ಠ 20 ಸಾವಿರ ಕೋಟಿ ರೂ.ನಷ್ಟವಾಗುತ್ತೆ. ಮತ್ತೆ ಮೂರು ವರ್ಷ ಮುಂದುವರೆಸಿ ಎಂದು ಪತ್ರ ಬರೆದರೆ ಸಾಕ? ಅವರು ಕೊಡಲಿಲ್ಲ ಅಂದ್ರೆ ಪರವಾಗಿಲ್ವ? ಆಗಲೂ ಸುಮ್ಮನಿರ್ತೀರ? ಒತ್ತಾಯ ಮಾಡಬೇಕು ಅಲ್ವ? ಈ ವರ್ಷ 18,109 ಕೋಟಿ ರೂಪಾಯಿ ಜಿಎಸ್‍ಟಿ ಪರಿಹಾರದ ರೂಪದಲ್ಲಿ ಸಾಲ ಕೊಟ್ಟಿದ್ದಾರೆ. ಈ ಸಾಲವನ್ನು ನಮ್ಮ ರಾಜ್ಯದ ಜನರಿಂದಲೇ ಸೆಸ್ ಮೂಲಕ ಕೇಂದ್ರ ಸರಕಾರ ಸಂಗ್ರಹಿಸುತ್ತದೆ. ಇದು ನಮ್ಮ ಜನರಿಗೆ ಹೊರೆಯಲ್ಲವೇ? ಎಂದು ಅವರು ಪ್ರಶ್ನಿಸಿದರು. 

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ 165 ಭರವಸೆಗಳನ್ನು ನೀಡಿತ್ತು, ನಾವು ಅಧಿಕಾರಕ್ಕೆ ಬಂದ ನಂತರ ಆ ಭರವಸೆಗಳಲ್ಲಿ ಶೇ.99 ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ, ಚುನಾವಣಾ ಪ್ರಣಾಳಿಕೆಯಲ್ಲಿ ಇಲ್ಲದ ಸುಮಾರು 25 ಹೊಸ ಯೋಜನೆಗಳನ್ನು ಜಾರಿಮಾಡಿದ್ದೆವು. ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಬಿಜೆಪಿಯವರು 2018ರ ಚುನಾವಣೆಯಲ್ಲಿ 599 ಆಶ್ವಾಸನೆಗಳನ್ನು ಜನರ ಮುಂದೆ ಇಟ್ಟಿದ್ದರು. ಈ ಪೈಕಿ ಶೇ.90ರಷ್ಟು ಆಶ್ವಾಸನೆಗಳನ್ನು ಈವರೆಗೆ ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ಬಿಜೆಪಿಯವರ ಪ್ರಮುಖ ಭರವಸೆಗಳಾದ ರೈತರ ಒಂದು ಲಕ್ಷದ ವರೆಗಿನ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕುಗಳಲ್ಲಿನ ಸಾಲವನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೆ ಮನ್ನಾ ಮಾಡಲಾಗುವುದು. ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದಿದ್ದರೂ ರೈತರು ಸಹಕಾರಿ ಬ್ಯಾಂಕುಗಳಲ್ಲಿನ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದೆವು ಎಂದು ಅವರು ಹೇಳಿದರು. 

ನೇಗಿಲ ಯೋಗಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ನೇರ ಆದಾಯ ವೃದ್ಧಿಗಾಗಿ 10 ಸಾವಿರದಿಂದ 20 ಲಕ್ಷ ರೂ.ವರೆಗೂ ಆರ್ಥಿಕ ನೆರವು. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ ಒಂದೂವರೆ ಪಟ್ಟು ಅಧಿಕ ಆದಾಯದ ಭರವಸೆ. ಅಲ್ಲದೆ, ರೈತ ಸ್ನೇಹಿ ಯೋಜನೆಗಳ ಮೇಲೆ ನಿಗಾ ಇಡಲು ಮುಖ್ಯಮಂತ್ರಿಗಳ ಕಚೇರಿಯಲ್ಲೇ ರೈತ ಬಂಧು ಇಲಾಖೆ ಸ್ಥಾಪನೆ ಮಾಡುವುದಾಗಿ ಹೇಳಿತ್ತು. ಆದರೆ, ಆಗಿಲ್ಲ ಎಂದು ಅವರು ಟೀಕಿಸಿದರು.

ಭೂರಹಿತ ಕೃಷಿ ಕಾರ್ಮಿಕರಿಗಾಗಿ ಮುಖ್ಯಮಂತ್ರಿ ರೈತ ಸುರಕ್ಷಾ ಯೋಜನೆಯಡಿಯಲ್ಲಿ ರೂ. 2 ಲಕ್ಷದ ವರೆಗಿನ ಅಪಘಾತ ವಿಮೆ ಸೌಲಭ್ಯ. ಬೆಲೆಯೇರಿಕೆ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗದಂತೆ ನಿರ್ವಹಿಸಲು 5000 ಕೋಟಿ ರೂ.ರೈತ ಬಂಧು ಮಾರುಕಟ್ಟೆ ನಿರ್ವಹಣಾ ವೆಚ್ಚ ಯೋಜನೆ ಜಾರಿಗೆ ಬರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

2023 ರೊಳಗಡೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 'ಸುಜಲಾಂ ಸುಫಲಾಂ' ಯೋಜನೆಯಡಿಯಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿ ನೀಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರಕಾರ ನೀರಾವರಿಗಾಗಿ ಖರ್ಚು ಮಾಡಿರುವುದು ಕೇವಲ ರೂ.40,000 ಕೋಟಿ ಮಾತ್ರ, ಈ ಬಜೆಟ್‍ನಲ್ಲಿ ರೂ.20,000 ಕೋಟಿ ಇಟ್ಟಿದ್ದಾರೆ. ಒಟ್ಟು ರೂ.60,000 ಕೋಟಿ ಆಯ್ತು. ಇನ್ನುಳಿದ 90,000 ಕೋಟಿ ರೂಪಾಯಿ ಎಲ್ಲಿ? ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಅವುಗಳ ಕೆಳಗೆ ಬರುವ ಎಲ್ಲ ಅಭಿವೃದ್ಧಿ ನಿಗಮಗಳಿಗೆ 400 ಕೋಟಿ ರೂ.ಒದಗಿಸುತ್ತೇವೆ ಎಂದಿದ್ದಾರೆ. ಈ 400 ಕೋಟಿ ಅನುದಾನದಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ 100 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 10 ಕೋಟಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 11 ಕೋಟಿ, ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 7.5 ಕೋಟಿ, ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಘೋಷಿಸಿದ್ದು 100 ಕೋಟಿ ಕೊಟ್ಟಿದ್ದು ಒಂದು ರೂಪಾಯಿ, ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ ಶೂನ್ಯ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಕಾಡೊಗೊಲ್ಲ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಮರಾಠ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸೊನ್ನೆ, ಒಟ್ಟು 400 ಕೋಟಿಯಲ್ಲಿ ಕೇವಲ 129.51 ಕೋಟಿ ರೂ. ಮಾತ್ರ ನೀಡಲಾಗಿದೆ. ಬಿಜೆಪಿಯವರು ಹೇಳೋದೊಂದು ಮಾಡೋದೊಂದು. ಇದಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಜಿಎಸ್‍ಟಿ ಪರಿಹಾರ ಪ್ರಸಕ್ತ ಸಾಲಿನ ಜೂನ್ ತಿಂಗಳಲ್ಲಿ ಮುಕ್ತಾಯವಾಗಲಿದೆ. ಈಗಾಗಲೆ ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನಾನು ಜಿಎಸ್‍ಟಿ ಕೌನ್ಸಿಲ್‍ನಲ್ಲಿಯೂ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡು ವರ್ಷ ಕೋವಿಡ್ ಇತ್ತು. ಜಿಎಸ್‍ಟಿ ಸಂಗ್ರಹವು ಕಡಿಮೆಯಾಗಿದೆ. ಆದುದರಿಂದ, ಜಿಎಸ್‍ಟಿ ಪರಿಹಾರವನ್ನು ಇನ್ನೂ ಮೂರು ವರ್ಷಗಳ ಕಾಲ ಮುಂದುವರೆಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಎಲ್ಲ ರಾಜ್ಯಗಳ ಬೇಡಿಕೆಯೂ ಇದೆ ಆಗಿದೆ. ಬಜೆಟ್ ಅಧಿವೇಶನ ಮುಗಿದ ನಂತರ ಮತ್ತೊಮ್ಮೆ ಹೊಸದಿಲ್ಲಿಗೆ ತೆರಳಿ ಕೇಂದ್ರ ಸರಕಾರದ ಜೊತೆ ಚರ್ಚೆ ಮಾಡಲಾಗುವುದು.

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News