ಕೇಂದ್ರದ ಮೇಲೆ ಒತ್ತಡ ತಂದು ಅರಣ್ಯ ಕಾಯ್ದೆ ತಿದ್ದುಪಡಿ ಮಾಡಿಸದಿದ್ದರೆ ಸಿಎಂ ಮನೆಗೆ ಮುತ್ತಿಗೆ: ತೀ.ನಾ ಎಚ್ಚರಿಕೆ
ಶಿವಮೊಗ್ಗ,ಮಾ.07: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಮಲೆನಾಡು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ‘ಸಂಸದರ ಮನೆ ಚಲೋ’ ಪ್ರತಿಭಟನಾ ಕಾರ್ಯಕ್ರಮ ಶಿಕಾರಿಪುರ ಪಟ್ಟಣದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು.
ಸಂಸದ ರಾಘವೇಂದ್ರ ಅವರ ಮನೆಗೆ ರೈತರು ತೆರಳಲು ಪೊಲೀಸರು ಅವಕಾಶ ನೀಡದ ಕಾರಣ ರೈತರು ತಾಲ್ಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿ,ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಮಾತನಾಡಿ, ‘ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರ ಜೀವನ ಇನ್ನು ಕತ್ತಲೆಯಲ್ಲಿದೆ. 50 ಸಾವಿರ ಕುಟುಂಬಗಳು ಭೂಮಿಯ ಹಕ್ಕು ಪತ್ರ ದೊರೆಯದೇ ಸಂಕಷ್ಟದಲ್ಲಿವೆ.ಆಡಳಿತ ಪಕ್ಷದ ಶಾಸಕರು,ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿರುವುದು ಆಕ್ರೋಶ ವ್ಯಕ್ತಪಡಿಸಿದ ತೀ.ನಾ ಶ್ರೀನಿವಾಸ್,ಹಲವು ದಶಕಗಳು ಕಳೆದರೂ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ಪತ್ರ ಕೊಡಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
‘ಸಾಗರ ಹಾಗೂ ಸೊರಬ ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುತ್ತಿದ್ದಾರೆ. ಆದರೆ ಶಾಸಕರಾದ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ಸಾಗುವಳಿದಾರರ ಪರ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರಾಜ್ಯದ 28 ಸಂಸದರೊಂದಿಗೆ ದೆಹಲಿಗೆ ತೆರಳಿ ಬಗರ್ ಹುಕುಂ ಸಾಗುವಳಿದಾರರಿಗೆ 75 ವರ್ಷದ ದಾಖಲೆ ಸಲ್ಲಿಸುವ ಬದಲು 25 ವರ್ಷ ದಾಖಲೆ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಕಾಯ್ದೆಗೆ ತಿದ್ದುಪಡಿ ಮಾಡಿಸಬೇಕು. ತಿದ್ದುಪಡಿ ಮಾಡಿಸದಿದ್ದರೆ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.
ಸೊರಬ ರೈತ ಮುಖಂಡ ಅಜೀಜ್ ಸಾಬ್, ‘ಬಗರ್ ಹುಕುಂ ಸಾಗುವಳಿದಾರರ ಸಾವಿರಾರು ಅರ್ಜಿಗಳನ್ನು ಉಪವಿಭಾಗಾಧಿಕಾರಿ ವಜಾ ಮಾಡಿದ್ದಾರೆ. ಸೊರಬ ತಾಲ್ಲೂಕಿನಲ್ಲಿ ಅರಣ್ಯಾಧಿಕಾರಿಗಳು ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಆದರೆ ಸಂಸದ ರಾಘವೇಂದ್ರ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ರೈತರ ಪರವಾಗಿ ನಿಲ್ಲುತ್ತಿಲ್ಲ. ರೈತರು ಹಕ್ಕು ಪತ್ರ ಪಡೆದುಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕುಬಎಂದು ಕರೆ ನೀಡಿದರು.
ನಂತರವ ತಾಲ್ಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎಂ.ಪಿ. ಕವಿರಾಜ್ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆ ಕಾಂಗ್ರೆಸ್ ಸದಸ್ಯ ಎಸ್.ಪಿ. ನಾಗರಾಜ ಗೌಡ್ರು, ವಕೀಲ ನಿಂಗಪ್ಪ, ರೈತ ಮುಖಂಡರಾದ ರಘುಪತಿ ಕಟ್ಟಿಗೆಹಳ್ಳ, ಪರಶುರಾಮ್ ಶೆಟ್ಟಿಹಳ್ಳಿ, ಎಂ.ಬಿ. ರಾಜಪ್ಪ, ಶಿರಿವಾಳ ಧರ್ಮೇಂದ್ರ, ದಿನೇಶ್, ಸುಭಾಷ್, ಷಣ್ಮುಖಪ್ಪ ಕಂಚಾಣಸರ, ಮಂಜುನಾಥ್ ಕೆರೆಗದ್ದೆ, ರಾಜು ದೇವಾಡಿಗ, ಈಳಿ ಮಂಜುನಾಥ್, ಗಿಡ್ಡಪ್ಪ, ಎನ್. ಅರುಣ್ ಕುಮಾರ್ ಇದ್ದರು.