‘ರಾಜ್ಯ ಬಜೆಟ್’ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1401.69 ಕೋಟಿ ರೂ.ಅನುದಾನ: ಅಬ್ದುಲ್ ಅಝೀಮ್

Update: 2022-03-07 17:41 GMT

ಬೆಂಗಳೂರು, ಮಾ.7: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ 2022-23ನೆ ಸಾಲಿನ ರಾಜ್ಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1401.69 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದರು.

ಸೋಮವಾರ ನಗರದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 3 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸುವಂತೆ ಸರಕಾರಕ್ಕೆ ಕೋರಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ನಮ್ಮ ನಿರೀಕ್ಷೆಯಷ್ಟು ಅನುದಾನ ಸಿಗದೆ ಹೋದರೂ, ಅಲ್ಪಸಂಖ್ಯಾತರಿಗೆ ಬಜೆಟ್‍ನಲ್ಲಿ ನ್ಯಾಯ ಒದಗಿಸಲಾಗಿದೆ ಎಂದರು.

2021-22ನೆ ಸಾಲಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1246.84 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು. ಈ ಬಾರಿಯ ಬಜೆಟ್‍ನಲ್ಲಿ 1401.69 ಕೋಟಿ ರೂ.ಗಳನ್ನು ಒದಗಿಸುವ ಮೂಲಕ 154.85 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿಸಿದ್ದಾರೆ ಎಂದು ಅಬ್ದುಲ್ ಅಝೀಮ್ ಹೇಳಿದರು.

ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ 1247.27 ಕೋಟಿ ರೂ., ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂ., ವಕ್ಫ್ ಬೋರ್ಡ್‍ಗೆ 93.41 ಕೋಟಿ ರೂ., ಅಲ್ಪಸಂಖ್ಯಾತರ ಆಯೋಗಕ್ಕೆ 1 ಲಕ್ಷ ರೂ., ಉರ್ದು ಅಕಾಡೆಮಿಗೆ 1 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅಬ್ದುಲ್ ಅಝೀಮ್ ಮಾಹಿತಿ ನೀಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿಯಲ್ಲಿ ಒಂದೆ ಕಡೆ ಕಾರ್ಯನಿರ್ವಹಿಸುತ್ತಿರುವ ಹಲವು ವಸತಿ ಶಾಲೆಗಳನ್ನು ಒಂದುಗೂಡಿಸಿ, ಜಿಲ್ಲೆಗೊಂದು ಕನಿಷ್ಠ ಒಂದು ಶಾಲೆಯನ್ನು ಪಿಯು ಕಾಲೇಜಾಗಿ ಮೇಲ್ದರ್ಜೆಗೇರಿಸಿ, ಸಿಬಿಎಸ್‍ಇ ಪಠ್ಯಕ್ರಮದೊಂದಿಗೆ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಹಾಗೂ ವಿಜ್ಞಾನ ಪ್ರಯೋಗಾಲಯವನ್ನು ಒದಗಿಸಿ ಆಧುನೀಕರಣಗೊಳಿಸಿ, ಆ ಶಾಲೆಯನ್ನು ‘ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ’ ಎಂದು ಮರು ನಾಮಕರಣಗೊಳಿಸಿ ಆರಂಭಿಸಲು, 25 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಲ್ಲಿರುವ ಮಕ್ಕಳ ಸಂಖ್ಯೆಯನ್ನು 100 ರಿಂದ 125ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ, ನಮ್ಮ 304 ಹಾಸ್ಟೆಲ್‍ಗಳಲ್ಲಿ ಹೆಚ್ಚುವರಿಯಾಗಿ 7,640 ಮಕ್ಕಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಆ ಮೂಲಕ ಅಲ್ಪಸಂಖ್ಯಾತರ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದಂತಾಗಿದೆ ಎಂದು ಅಬ್ದುಲ್ ಅಝೀಮ್ ತಿಳಿಸಿದರು.

ಇದಲ್ಲದೆ, ಡ್ರೋನ್ ಮೂಲಕ ವಕ್ಫ್ ಆಸ್ತಿಗಳ ಸರ್ವೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಬೀದಿ ವ್ಯಾಪಾರಿಗಳು, ತಳ್ಳುವ ಗಾಡಿಯ ವ್ಯಾಪಾರಿಗಳು, ಆಟೋ ಚಾಲಕರು ಸೇರಿದಂತೆ ಇನ್ನಿತರ ಶ್ರಮಿಕ ವರ್ಗದವರ ಜಿವನೋಪಾಯಕ್ಕೆ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ಅವರು ಹೇಳಿದರು.

ಯೋಧ ಅಲ್ತಾಫ್ ಅಹ್ಮದ್ ನಿವಾಸಕ್ಕೆ ಭೇಟಿ

ಜಮ್ಮು ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಯೋಧ ಅಲ್ತಾಫ್ ಅಹ್ಮದ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಲಿದ್ದು, ಅಲ್ಲಿನ ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾಹಿತಿಗಳನ್ನು ಪಡೆದು, ಅಲ್ತಾಫ್ ಅಹ್ಮದ್ ಕುಟುಂಬ ವರ್ಗದವರಿಗೆ ಸರಕಾರದಿಂದ ಸಿಗಬೇಕಿರುವ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಲಾಗವುದು. ಜೊತೆಗೆ, ಶಿವಮೊಗ್ಗ ಹಾಗೂ ವಿಜಯಪುರಕ್ಕೂ ಭೇಟಿ ನೀಡಲಿದ್ದೇನೆ.

-ಅಬ್ದುಲ್ ಅಝೀಮ್, ಅಧ್ಯಕ್ಷ, ಅಲ್ಪಸಂಖ್ಯಾತರ ಆಯೋಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News