×
Ad

ತಾಲೂಕು ಕಚೇರಿಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಆರ್.ಅಶೋಕ್

Update: 2022-03-07 23:22 IST

ಬೆಂಗಳೂರು, ಮಾ. 7: ‘ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್  ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಸಂಗಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಭದ್ರಾವತಿ ತಾಲ್ಲೂಕಿನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸರಕಾರ ಕಾರ್ಯೋನ್ಮುಖವಾಗಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆಯೋ ಅವುಗಳನ್ನು ಭರ್ತಿ ಮಾಡಿಕೊಳ್ಳಲು ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಭದ್ರಾವತಿಗೆ ತಹಶಿಲ್ದಾರ್ ಗ್ರೇಡ್-1 ಒಂದು, ತಹಸೀಲ್ದಾರ್ ಗ್ರೇಡ್-2 ಒಂದು, ಶಿರಸ್ತೇದಾರ್ 7, ಪ್ರಥಮ ದರ್ಜೆ ಸಹಾಯಕರು/ಕಂದಾಯ ನಿರೀಕ್ಷಕ 9 ಹುದ್ದೆಗಳಲ್ಲಿ 6, ದ್ವಿತೀಯ ದರ್ಜೆ ಸಹಾಯಕರಲ್ಲಿ 11ರಲ್ಲಿ 10 ಭರ್ತಿ, ಗ್ರಾಮಲೆಕ್ಕಗರಲ್ಲಿ 47 ಹುದ್ದೆಗಳ ಪೈಕಿ 34 ಹುದ್ದೆಗಳು ಭರ್ತಿಯಾಗಿವೆ. ಗ್ರಾಮಲೆಕ್ಕಿಗ 13, ವಾಹನ ಚಾಲಕರು-1, ಬೆರಳಚ್ಚುಗಾರರು 3, ಗ್ರೂಪ್ ‘ಡಿ' 3 ಸೇರಿದಂತೆ ಇಲ್ಲಿ 24 ಹುದ್ದೆಗಳು ಖಾಲಿ ಇವೆ. 

ಈಗಾಗಲೇ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಕೌನ್ಸಿಲ್ ನಡೆದಿದೆ. ಉಳಿದಿರುವ ಖಾಲಿ ಇರುವ ಇತರೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಅಶೋಕ್ ಇದೇ ವೇಳೆ ಸದನಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News