×
Ad

ಎತ್ತಿನ ಹೊಳೆಯಿಂದ ಚಿಕ್ಕಬಳ್ಳಾಪುರಕ್ಕೆ ನೀರು ಬಂದರೆ, ನೇಣಿಗೇರಲು ಸಿದ್ಧ: ಪರಿಷತ್ ಸದಸ್ಯ ಭೋಜೇಗೌಡ

Update: 2022-03-07 23:34 IST

ಬೆಂಗಳೂರು, ಮಾ.7: ಒಂದು ವೇಳೆ ಚಿಕ್ಕಬಳ್ಳಾಪುರಕ್ಕೆ ಎತ್ತಿನ ಹೊಳೆಯಿಂದ ನೀರು ಬಂದಿದ್ದೇ ಆದಲ್ಲಿ ನೇಣಿಗೇರಲು ನಾನು ಸಿದ್ಧ ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ಸರಕಾರಕ್ಕೆ ಸವಾಲು ಹಾಕಿದರು.

ಸೋಮವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ ನಿಯಮ 72 ರ ಅಡಿ ಎತ್ತಿನಹೊಳೆ ಯೋಜನೆ ಕುರಿತು ಕಾಂಗ್ರೆಸ್ ಸದಸ್ಯ ರಾಜೇಂದ್ರ ರಾಜಣ್ಣ ಪ್ರಸ್ತಾಪಿಸಿ, ಯೋಜನೆ ಜಾರಿ ಕುರಿತು ಒತ್ತಾಯಿಸಿದರು. 

ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಭೂಸ್ವಾಧೀನ ಸಮಸ್ಯೆ ಇದೆ. ನಮ್ಮ ಸರಕಾರಕ್ಕೆ ಬದ್ಧತೆ ಇಲ್ಲ ಎನ್ನುವುದು ಸುಳ್ಳು. ನಮ್ಮ ಸರಕಾರ ಇದ್ದಾಗಲೇ ಯೋಜನೆ ಮಂಜೂರು ಮಾಡಿದೆ ಎಂದರು.

ಅಲ್ಲದೆ, 2013ರಲ್ಲಿ ದೇಶಕ್ಕೆ ಅನ್ವಯ ಆಗುವ ಭೂ ಸ್ವಾಧೀನ ಕಾಯ್ದೆ ಜಾರಿಯಾಯಿತು. ನಿಯಮಾವಳಿ ಪ್ರಕಾರ, ದರದ ನಾಲ್ಕು ಪಟ್ಟು ಪರಿಹಾರ ಕೊಡಲು ಅವಕಾಶ ಕಲ್ಪಿಸಲಾಗಿದೆ ಎಂದ ಅವರು, 2 ಟಿಎಂಸಿ ಸಂಗ್ರಹ ಸಾಮಥ್ರ್ಯ ಇದ್ದರೂ 10 ಟಿಎಂಸಿ ನೀರು ಬಳಕೆಗೆ ಕ್ರಮ ವಹಿಸಲಾಗುತ್ತದೆ. ಹಾಸನ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಏಳು ಜಿಲ್ಲೆಗೆ ಉಪಯೋಗವಾಗಲಿದೆ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಜೆಡಿಎಸ್‍ನ ಭೋಜೇಗೌಡ, ಇದು ಚುನಾವಣೆ ದೃಷ್ಟಿಯಿಂದ ಮಾಡುತ್ತಿರುವ ಯೋಜನೆ. ಎತ್ತಿನಹೊಳೆಯಿಂದ ಚಿಕ್ಕಬಳ್ಳಾಪುರಕ್ಕೆ ನೀರು ತಲುಪಲ್ಲ. ಇದೊಂದು ಕಾಮಧೇನು, ಈ ಕಾಮಧೇನುವಿನಿಂದ ಅನುಕೂಲ ಆಗಲಿದೆ ಎಂದು ನಾನು ಹೇಳಲ್ಲ. ಕೆಲವರಿಗೆ ಮಾತ್ರ ಲಾಭದಾಯಕ ಯೋಜನೆ ಇದು. ಅಷ್ಟೇ ಅಲ್ಲದೆ, ಎತ್ತಿನಹೊಳೆ ಜಾರಿ ಆಗಿ ಚಿಕ್ಕಬಳ್ಳಾಪುರಕ್ಕೆ ನೀರು ಬಂದಲ್ಲಿ ನಾನು ನೇಣಿಗೇರಲು ಸಿದ್ಧ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News