ಕನ್ನಡ ಕಡ್ಡಾಯ ವಿಚಾರ: ರಾಜ್ಯದ ನಿಲುವು ಪುನರ್ ಪರಿಗಣಿಸಲು ಸೂಚಿಸಲಾಗುವುದು; ಹೈಕೋರ್ಟ್
ಬೆಂಗಳೂರು, ಮಾ.8: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ನಿಲುವನ್ನು ಪುನರ್ ಪರಿಗಣಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಲಾಗುವುದು ಎಂದು ಹೈಕೋರ್ಟ್ ಹೇಳಿದೆ.
ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ರಾಜ್ಯ ಸರಕಾರದ ಆದೇಶ ಪ್ರಶ್ನಿಸಿ, ‘ಸಂಸ್ಕøತ ಭಾರತಿ ಟ್ರಸ್ಟ್’, ‘ಹಯಗ್ರೀವ ಟ್ರಸ್ಟ್’, ‘ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ ಫೌಂಡೇಷನ್’ ಹಾಗೂ ‘ಸಂಸ್ಕೃತ ಪ್ರಾಧ್ಯಾಪಕ ಸಂಘ’ಗಳು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು ಕೋರ್ಟ್‍ಗೆ ಬಂದಿಲ್ಲ. ನ್ಯಾಯಪೀಠದ ಮುಂದೆ ಬಂದ ಬಳಿಕ ಅವರಿಗೆ ರಾಜ್ಯ ಸರಕಾರ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ನಿಲುವನ್ನು ಪುನರ್ ಪರಿಗಣಿಸಲು ಸೂಚನೆ ನೀಡಲಾಗುವುದು ಎಂದು ನ್ಯಾಯಪೀಠವು ಹೇಳಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಸ್.ಎಸ್.ನಾಗಾನಂದ್, ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ.ನರಗುಂದ್, ಶಿವಕುಮಾರ್ ಸೇರಿ ಆರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳ ಪರವಾಗಿ ವಕೀಲ ಶ್ರೀಧರ್ ಪ್ರಭು ಅವರು ವಾದಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಎ.4ಕ್ಕೆ ಮುಂದೂಡಿತು.