×
Ad

52 ಬಜೆಟ್ ಘೋಷಣೆಗಳ ಪೈಕಿ ಕೆಲ ಯೋಜನೆಗಳಿಗೆ ಇನ್ನೂ ಆದೇಶವನ್ನೇ ಹೊರಡಿಸಿಲ್ಲ: ಸಿದ್ದರಾಮಯ್ಯ ಟೀಕೆ

Update: 2022-03-08 19:42 IST

ಬೆಂಗಳೂರು, ಮಾ. 8: ‘ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳುತ್ತಿದ್ದರೂ 52ಕ್ಕೂ ಹೆಚ್ಚು ಬಜೆಟ್ ಘೋಷಣೆಗಳ ಪೈಕಿ ಕೆಲ ಯೋಜನೆಗಳಿಗೆ ಇನ್ನೂ ಆದೇಶ ಹೊರಡಿಸಿಲ್ಲ, ಕೆಲವನ್ನು ಕೈಬಿಡಲಾಗಿದೆ. ಈ ಬಗ್ಗೆ ಸರಕಾರ ಏನೂ ಹೇಳಿಲ್ಲ. ಅಂದರೆ ಭರವಸೆ ನೀಡಿದ್ದು ಏಕೆ? ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಅಲ್ಲವೇ?' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಂಗಳವಾರ ವಿಧಾಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಚಾಮರಾಜನಗರದಲ್ಲಿ ಅರಿಶಿನ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕಳೆದ ಬಜೆಟ್‍ನಲ್ಲಿ ಘೋಷಿಸಿ, ನಂತರ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಯೋಜನೆ ಕೈಬಿಡುವುದಾಗಿದ್ದರೆ ಘೋಷಣೆ ಮಾಡಿದ್ದು ಏಕೆ? ಸರಕಾರ ಯೋಜನೆಯನ್ನೇ ಕೈಬಿಟ್ಟರೆ ಜನ ಏನು ಮಾಡಬೇಕು? ಯೋಜನೆ ಘೋಷಿಸಿ, ಹಣ ಒದಗಿಸಲಾಗದೆ ಅದನ್ನು ಕೈಬಿಟ್ಟು ಜನರಿಗೆ ದ್ರೋಹ ಎಸಗಿದೆ' ಎಂದು ದೂರಿದರು. 

ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಅಳವಡಿಸಿಕೊಂಡಿದ್ದೇವೆಂದು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಆದರೆ ಪ್ರಸಕ್ತ ಸಾಲಿನ ಬಜೆಟ್ ಈ ಐದು ಸೂತ್ರಗಳಿಗೆ ತದ್ವಿರುದ್ಧವಾಗಿದೆ. ನಮ್ಮ ಅವಧಿಯಲ್ಲಿ ಇಲಾಖಾವಾರು ಮಾಹಿತಿ ಇತ್ತು, ಇದೀಗ ವಲಯವಾರು ಬಜೆಟ್ ಮಂಡಿಸಿದ್ದು, ಹಲವು ಇಲಾಖೆಗಳಿಗೆ ಗಣನೀಯ ಪ್ರಮಾಣದಲ್ಲಿ ಅನುದಾನ ಕಡಿತ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಬಡ್ಡಿ, ಸಾಲ ಮರುಪಾವತಿಗೆ 43ಸಾವಿರ ಕೋಟಿ ರೂ.ಗಳು. ಇದು ಬಜೆಟ್‍ನ ಶೇ.17ರಷ್ಟು ಆಗುತ್ತದೆ. ಇಷ್ಟು ಅನುದಾನ ಯಾವ ಇಲಾಖೆಗೂ ಇಟ್ಟಿಲ್ಲ. ಈ ಎಲ್ಲ್ಲ ವಲಯಗಳನ್ನು ಸೇರಿಸಿದರೆ ಒಟ್ಟು ರೂ. 2,69,540 ಕೋಟಿ ಆಗುತ್ತದೆ. ಸರಕಾರ ಈ ಸಾಲಿನಲ್ಲಿ 2,65,720 ಕೋಟಿ ರೂ.ಖರ್ಚು ಮಾಡುತ್ತೇವೆಂದು ಹೇಳಿದೆ. ಎಂದರೆ 3,820 ಕೋಟಿ ರೂ.ಹೆಚ್ಚುವರಿ ಅನುದಾನ ತೋರಿಸಲಾಗಿದೆ. ಜನರ ಕಣ್ಣಿಗೆ ಮಣ್ಣೆರೆಚಲು ಹೆಚ್ಚು ಅನುದಾನ ಖರ್ಚು ಮಾಡುತ್ತೇವೆ ಎಂದು ತೋರಿಸುತ್ತಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಸರಕಾರದ ಅನುದಾನ ಹಂಚಿಕೆ ಪ್ರಮಾಣ ನಾಲ್ಕು ವರ್ಷಗಳ ನಮ್ಮ ಸರಕಾರ ನೀಡಿದ್ದಕ್ಕಿಂತ ಈಗ ಕಡಿಮೆಯಾಗಲು ಕೇಂದ್ರದ ತೆರಿಗೆಯಲ್ಲಿ ನಮ್ಮ ಪಾಲನ್ನು ಸರಿಯಾಗಿ ನೀಡದಿರುವುದು, 15ನೆ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲು ಹೆಚ್ಚಾಗಿರುವುದು ಮತ್ತು ರಾಜ್ಯ ಸರಕಾರ 3 ವರ್ಷಗಳಲ್ಲಿ 2,64,000 ಕೋಟಿ ರೂ.ಸಾಲ ಮಾಡಿರುವುದು ಕಾರಣ' ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News