‘ಸಬ್ ಕಾ ಸರ್ವನಾಶ್, ಗರೀಬರ ಹಠಾವೋ': ಸದನದಲ್ಲಿ ಸಿದ್ದರಾಮಯ್ಯ- ಸಿಎಂ ಬೊಮ್ಮಾಯಿ ವಾಕ್ಸಮರ
ಬೆಂಗಳೂರು, ಮಾ. 8: ಸಬ್ ಕಾ ಸಾಥ್, ಸಬ್ ಕಾ ವಿಕಾಶ್ ಘೋಷಣೆ ‘ಸಬ್ ಕಾ ಸರ್ವವಿನಾಶ್' ಆಗಿದ್ದು, ಗರೀಬಿ ಹಠಾವೋ ಘೋಷಣೆ ‘ಗರೀಬರ ಹಠಾವೋ' ಆಗಿದೆ ಎಂಬುದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ಏರಿದ ಧ್ವನಿಯಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ, ವಾಗ್ದಾದ, ಕೋಲಾಹಲಕ್ಕೆ ಕಾರಣವಾಯಿತು.
ಮಂಗಳವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಪಾಲ್ಗೊಂಡು ಮಾತನಾಡುತ್ತಿದ್ದ ಸಿದ್ದರಾಮಯ್ಯ, ‘ಸಬ್ ಕಾ ಸಾಥ್-ಸಬ್ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್-ಸಬ್ ಕಾ ಪ್ರಯಾಸ್' ಘೋಷಣೆ ವಾಸ್ತವದಲ್ಲಿ ಸಬ್ ಕಾ ಸರ್ವನಾಶ್ ಆಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರದ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿಕರಣ ಮಾಡಲಾಗುತ್ತಿದೆ. ಎರಡು ವರ್ಷಗಳಲ್ಲಿ 4 ಕೋಟಿಗೂ ಅಧಿಕ ಸಂಖ್ಯೆಯ ಜನರು ಬಡತನ ರೇಖೆಗಿಂತ ಕೆಳಗಿಳಿದಿದ್ದು, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ' ಎಂದು ವಾಗ್ದಾಳಿ ನಡೆಸಿದರು.
ಇದರಿಂದ ಆಕ್ರೋಶಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕಾಂಗ್ರೆಸ್ ಆಡಳಿತ ನೀತಿಯಿಂದಲೇ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಡಬ್ಲ್ಯೂಟಿಓ ಒಪ್ಪಂದ ಮಾಡಿಕೊಂಡಿದ್ದು ಯಾರು? ನವರತ್ನಗಳು ಮಾರಾಟ ಮಾಡಲು ಆರಂಭವಾಗಿದ್ದು ಕಾಂಗ್ರೆಸ್ ಅವಧಿಯಲ್ಲೇ. ಬಿಜೆಪಿ ಸರಕಾರ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಪ್ರಯತ್ನ ಮಾಡುತ್ತಿದೆ. ಗರೀಬಿ ಹಠಾವೋ ಹೆಸರಿನಲ್ಲಿ ಗರೀಬರ ಹಠಾವೋ, ಜನರನ್ನು ಮತ್ತಷ್ಟು ಬಡವರನ್ನಾಗಿ ಮಾಡಿದ್ದೀರಿ' ಎಂದು ತಿರುಗೇಟು ನೀಡಿದರು.
ಇದಕ್ಕೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ‘ಅಟಲ್ ಬಿಹಾರಿ ವಾಜಪೇಯಿ ದೇಶ ಪ್ರಕಾಶಿಸುತ್ತಿದೆ ಎಂದಿದ್ದರು. ಆದರೆ, ದೇಶ ಎಲ್ಲಿ ಪ್ರಕಾಶಿಸಿದ್ದು' ಎಂದು ಪ್ರಶ್ನಿಸಿದರು. ‘ದೇಶ ಪ್ರಕಾಶಿಸಿದ್ದರಿಂದಲೇ ರಾಷ್ಟ್ರದಲ್ಲಿ ಚತುಷ್ಪತ ರಸ್ತೆಗಳು ದೊಡ್ಡ ಸಂಖ್ಯೆಯಲ್ಲಿ ಆಗಿದ್ದು' ಎಂದು ಬಸವರಾಜ ಬೊಮ್ಮಾಯಿ ವಾಗ್ಬಾಣ ಬಿಟ್ಟರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.
ಬಳಿಕ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ‘ಜಲಾಶಯಗಳು, ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ ನಿಮ್ಮ ಕಾಲದಲ್ಲಿ ಆಯಿತೇ?' ಎಂದರು. ‘ನಿಮ್ಮ ಕಾಲದಲ್ಲಿ ಆಹಾರ ಇರಲಿಲ್ಲ, ಅಮೆರಿಕಾದ ಗೋಧಿಗೆ ಭಿಕ್ಷೆ ಬೇಡಬೇಕಾಯಿತು. ಇಂದಿನ ಸಾಲದ ಮೂಲ ಕಾಂಗ್ರೆಸ್. ಮನಮೋಹನ್ ಸಿಂಗ್ ಆಡಳಿತದಲ್ಲಿ ದೇಶದ ಆಸ್ತಿಗಳನ್ನು ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಖಾಸಗಿಕರಣ, ಉದಾರಿಕರಣ ಮಾಡಿದ್ದೇ ಕಾಂಗ್ರೆಸ್ ಎಂದು ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
‘ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರಕಾರ, ರಾಜ್ಯದಲ್ಲಿ ಸ್ವರ್ಗ ಸೃಷ್ಟಿಯಾಗುತ್ತದೆ ಎಂದಿದ್ದರು. ಆದರೆ, ಡಬಲ್ ಎಂಜಿನ್ ವಿಫಲವಾಗಿದ್ದು, ಸಿಂಗಲ್ ಎಂಜಿನ್ ಆಗುತ್ತಿದ್ದು, ನಿಂತು ಹೋಗುವ ಲಕ್ಷಣಗಳಿವೆ'
-ಕೆ.ಆರ್.ರಮೇಶ್ ಕುಮಾರ್ ಮಾಜಿ ಸ್ಪೀಕರ್
‘ಕೇಂದ್ರ ಹಾಗೂ ರಾಜ್ಯ ಡಬಲ್ ಎಂಜಿನ್ ಸರಕಾರ ಆಗಿದ್ದರಿಂದಲೇ ನಾವು ಇಲ್ಲಿಯವರೆಗೆ ಎಳೆದುಕೊಂಡು ಬಂದಿದ್ದೇವೆ. ನೀವೇ ಆಗಿದಿದ್ದರೆ ಸಂಪೂರ್ಣ ನಿಂತೇ ಹೋಗುತ್ತಿತ್ತು'
-ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ
‘ಯಾವಾಗಲೂ ಸರಕಾರ ನಿಲ್ಲುವುದಿಲ್ಲ. ಅದು ಡಬಲ್ ಎಂಜಿನ್, ಸಿಂಗಲ್ ಎಂಜಿನ್ ಪ್ರಶ್ನೆಯಲ್ಲ. ನೀವೂ ಇಲ್ಲದೇ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತೊಂದು ಸರಕಾರ ಅಧಿಕಾರಕ್ಕೆ ಬರುತ್ತಿತ್ತು'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ