ಮಾ.30ರೊಳಗೆ ಡಿಮ್ಹಾನ್ಸ್ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಿ: ಹೈಕೋರ್ಟ್ ಸೂಚನೆ

Update: 2022-03-08 16:27 GMT

ಬೆಂಗಳೂರು, ಮಾ.8: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ ಅಗತ್ಯ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಮಾ.30ರೊಳಗೆ ಡಿಮ್ಹಾನ್ಸ್‍ಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ. 

ಡಿಮ್ಹಾನ್ಸ್‍ಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಒಂದು ವೇಳೆ ನ್ಯಾಯಾಲಯದ ಆದೇಶದಂತೆ ಡಿಮ್ಹಾನ್ಸ್‍ಗೆ ಮೂಲಸೌಕರ್ಯ ಕಲ್ಪಿಸದಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಂದಿನ ವಿಚಾರಣೆ ವೇಳೆ ಕೋರ್ಟ್‍ಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿದೆ.

ಸರಕಾರದ ಪರ ವಕೀಲರು ಉತ್ತರಿಸಿ, ಆಸ್ಪತ್ರೆಯಲ್ಲಿ ಎಂಆರ್‍ಐ ಯಂತ್ರ ಅಳವಡಿಸುವ ಸಂಬಂಧ ಟೆಂಡರ್ ಕರೆದಿದ್ದು, ಕಾರ್ಯಾದೇಶವನ್ನೂ ನೀಡಲಾಗಿದೆ. ಯಂತ್ರಗಳು ಅಮೆರಿಕಾದಿಂದ ಇನ್ನಷ್ಟೇ ಪೂರೈಕೆಯಾಗಬೇಕಿದೆ. ಎಂಐಅರ್ ಯಂತ್ರ ಅವಳವಡಿಸುವುದು ಸೇರಿದಂತೆ ಡಿಮ್ಹಾನ್ಸ್‍ಗೆ ಅಗತ್ಯ ಸೌಲಭ್ಯ ಕಲ್ಪಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ ಎಂದರು. ಮಾರ್ಚ್ ವೇಳೆಗೆ ಪೂರ್ಣಗೊಳ್ಳಬಹುದು ಎಂದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಸರಕಾರ ತನ್ನ ಮಾತಿನಂತೆ ಮಾ. 30ರೊಳಗೆ ಕೆಲಸ ಪೂರ್ಣಗೊಳಿಸಬೇಕು. ಉನ್ನತೀಕರಿಸಿದ ಮನೋವೈದ್ಯಕೀಯ ಆಸ್ಪತ್ರೆಯು ಎಪ್ರಿಲ್ 1ರಿಂದ ಕೆಲಸ ಆರಂಭಿಸಬೇಕು. ಅದೇಶದ ಅನುಪಾಲನಾ ವರದಿಯನ್ನು ಪ್ರಮಾಣ ಪತ್ರದೊಂದಿಗೆ ಸಲ್ಲಿಸಬೇಕು, ಇಲ್ಲವಾದರೆ, ಮುಂದಿನ ವಿಚಾರಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು ಎಪ್ರಿಲ್ 5ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News