×
Ad

ಪೊಲೀಸರ ವರ್ಗಾವಣೆ ದಂಧೆ: ಬಿಜೆಪಿ ಪರಿಷತ್ ಸದಸ್ಯನಿಂದ ಸರಕಾರದ ವಿರುದ್ಧವೇ ಆರೋಪ

Update: 2022-03-08 22:10 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.8: ಪೊಲೀಸರ ವರ್ಗಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಡಳಿತ ಪಕ್ಷದ ಸದಸ್ಯ ಟಿ.ಎಂ.ಮುನಿರಾಜುಗೌಡ ಅವರು ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. 

ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಪ್ರಸ್ತಾಪಿಸಿದ ಅವರು, ಪೊಲೀಸರ ಪ್ರತಿ ವರ್ಗಾವಣೆಗೆ ಕನಿಷ್ಠ 10 ಲಕ್ಷದಿಂದ ಕೋಟಿ ಕೋಟಿ ರೂ.ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ. ಇಷ್ಟು ದುಡ್ಡು ಕೊಟ್ಟು ವರ್ಗಾವಣೆಯಾಗಿ ಬಂದ ಪೊಲೀಸರು ಅದನ್ನು ಮರುಪಾವತಿ ಮಾಡಿಕೊಳ್ಳಲು ಕಾನೂನು ಬಾಹಿರ ಕೃತ್ಯ ನಡೆಸುವವರ ಜತೆಗೆ ಕೈಜೋಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು ತಮಗೆ ಬೇಕಾದ ಸ್ಥಳಗಳಿಗೆ ತೆರಳಲು ಭಾರೀ ಪ್ರಮಾಣದಲ್ಲಿ ಹಣ ನೀಡಿ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಗಳಿಂದ ಪಾರದರ್ಶಕ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. 

ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್‍ನ ಹಿರಿಯ ಸದಸ್ಯ ಸಿ.ಎಂ. ಇಬ್ರಾಹಿಂ, ಆಡಳಿತ ಪಕ್ಷದ ಸದಸ್ಯರಾಗಿ ಪೊಲೀಸ್ ಇಲಾಖೆಯ ವರ್ಗಾವಣೆಯಲ್ಲಿ ನಡೆಯುತ್ತಿರುವ ಭಾರೀ ಪ್ರಮಾಣದ ಭ್ರಷ್ಟಾಚಾರವನ್ನು ಗಮನಕ್ಕೆ ತಂದಿದ್ದಕ್ಕೆ ತಮ್ಮನ್ನು ಅಭಿನಂದಿಸುವುದಾಗಿ ನುಡಿದರು.

ಈ ಮಧ್ಯೆ ಎದ್ದುನಿಂತ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಸಂಬಂಧ ಗೃಹ ಸಚಿವರಿಂದ ಉತ್ತರ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News