×
Ad

ಮೈಸೂರು: ಕ್ಲೋರಿನ್ ಸಿಲಿಂಡ್ ವಾಲ್ವ್ ತುಂಡಾಗಿದ್ದರಿಂದ ಅನಿಲ ಸೋರಿಕೆ ಶಂಕೆ; ಅಧಿಕಾರಿಗಳಿಂದ ತನಿಖೆ

Update: 2022-03-08 22:35 IST

ಮೈಸೂರು,ಮಾ.8: ಕಳೆದ ಎರಡು ವರ್ಷಗಳಿಂದ ಕ್ಲೋರಿನ್ ಸಿಲಿಂಡರ್ ಉಪಯೋಗಿಸದೆ ನೀರು ಶುದ್ಧೀಕರಣ ಗೋದಾಮಿನಲ್ಲಿ ಇಟ್ಟಿದ್ದ ಪರಿಣಾಮ ಸಿಲಿಂಡ್ ವಾಲ್ವ್ ತುಂಡಾಗಿ ಅನಿಲ ಸೋರಿಕೆಯಾಗಿರ ಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಎದುರಿನ ರೈಲ್ವೆ ಇಲಾಖೆಯ ಕ್ವಾರ್ಟರ್ಸ್‍ನಲ್ಲಿ ನೀರು ಶುದ್ಧೀಕರಣಕ್ಕಾಗಿ ಬಳಸುವ ಕ್ಲೋರಿನ್ ಅನಿಲ ಸೋರಿಕೆಯಾಗಿ ಹಲವರು ಅಸ್ವಸ್ಥಗೊಂಡಿದ್ದರು. ಇದೀಗ ಘಟನೆಗೆ ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.

ಸಿಲಿಂಡರ್ ವಾಲ್ವ್ ತುಂಡಾಗಿರುವುದರಿಂದ ಅನಿಲ ಸೋರಿಕೆಯಾಗಿರುವುದಾಗಿ ಮೊದಲು ಅಧಿಕಾರಿಗಳ ಗಮನಕ್ಕೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಕ್ಲೋರಿನ್ ಸಿಲಿಂಡರ್ ಅನ್ನು ಉಪಯೋಗಿಸದೆ ನೀರು ಶುದ್ಧೀಕರಣ ಗೋದಾಮಿನಲ್ಲಿ ಇಟ್ಟಿದ್ದರು. ನದಿ ನೀರನ್ನು ಸರಬರಾಜು ಮಾಡುತ್ತಿದ್ದ ಪರಿಣಾಮ ಕ್ಲೋರಿನ್ ಬಳಕೆ ಮಾಡದೆ ಹಾಗೆಯೇ ಇಟ್ಟಿದ್ದರು. ಆದರೆ, ಎರಡು ವರ್ಷಗಳಿಂದ ಹಾಗೆಯೇ ಇಟ್ಟಿದ್ದರಿಂದ ಕ್ಲೋರಿನ್ ಸಿಲಿಂಡರ್ ತುಕ್ಕು ಹಿಡಿದು ವಾಲ್ವ್ ತುಂಡಾಗಿ ಬಿದ್ದಿರಬಹುದು. ಅಥವಾ ಯಾರೋ ಕಿಡಿಗೇಡಿಗಳು ಸಿಲಿಂಡರ್‍ನ ಹಿತ್ತಾಳೆ ವಾಲ್ವ್ ಕದಿಯಲು ಅದರ ಮೇಲೆ ಕಲ್ಲು ಎತ್ತಿ ಹಾಕಿದ್ದರಿಂದ ವಾಲ್ವ್ ತುಂಡಾಗಿ ಅನಿಲ ಸೋರಿಕೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಿನ್ನೆ ನಡೆದಿದ್ದ ಅನಿಲ ಸೋರಿಕೆ ಘಟನೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದವರು ಹಾಗೂ ನೀರು ಶುದ್ಧೀಕರಣದ ಘಟಕದ ಪಕ್ಕದ ಮನೆಗಳಲ್ಲಿನ ನಿವಾಸಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ರೈಲ್ವೆ ಇಲಾಖೆಯ ಆಸ್ಪತ್ರೆ, ಕೆ.ಆರ್. ಆಸ್ಪತ್ರೆ ಹಾಗೂ ಚಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಪಡೆದು ಇಂದು ತಮ್ಮ ಮನೆಗಳಿಗೆ ವಾಪಸ್ ಆಗಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಸಿಬ್ಬಂದಿ ಅನಿಲ ಸೋರಿಕೆ ನಿಲ್ಲಿಸಿದ್ದಾರೆ. ಪೊಲೀಸರು ಕೆಆರ್ ಎಸ್ ರಸ್ತೆ ಮಾರ್ಗವನ್ನು ಬಂದ್ ಮಾಡಿದ್ದರಿಂದ ಹೆಚ್ಚು ಜನರಿಗೆ ತೊಂದರೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News