×
Ad

ಚಿಕ್ಕಮಗಳೂರು: ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಗ್ರಾ.ಪಂ ಸದಸ್ಯೆಯ ಪತಿ

Update: 2022-03-09 00:04 IST

ಚಿಕ್ಕಮಗಳೂರು, ಮಾ.8: ಕಾಲೇಜು ವಿದ್ಯಾರ್ಥಿನಿಯರು ಸಮವಸ್ತ್ರದ ವೇಲನ್ನು ಸ್ಕಾರ್ಫ್ ಮಾದರಿಯಲ್ಲಿ ತಲೆ ಮೇಲೆ ಹಾಕಿಕೊಂಡಿದ್ದನ್ನೇ ನೆಪ ಮಾಡಿಕೊಂಡು ಕಾಲೇಜು ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ್ದ ಗ್ರಾಪಂ ಸದಸ್ಯೆಯೊಬ್ಬರ ಪತಿ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ನಡೆಯುವಂತೆ ಬೆದರಿಕೆ ಹಾಕಿದ್ದಲ್ಲದೇ ಇದನ್ನು ಪ್ರಶ್ನಿಸಿದ ಕಾಲೇಜು ವಿದ್ಯಾರ್ಥಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯನ್ನೂ ಹಾಕಿರುವ ಘಟನೆಯೊಂದು ತಾಲೂಕಿನ ಮೂಗ್ತಿಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವರದಿಯಾಗಿದೆ.

ಚಿಕ್ಕಮಗಳೂರು ನಗರ ಸಮೀಪದಲ್ಲಿರುವ ಮೂಗ್ತಿಹಳ್ಳಿ ಗ್ರಾಮದಲ್ಲಿರುವ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರ ಪೈಕಿ ಕೆಲ ವಿದ್ಯಾರ್ಥಿನಿಯರು ಎಂದಿನಂತೆ ಸಮವಸ್ತ್ರದ ವೇಲನ್ನೇ ತಲೆ ಮೇಲೆ ಹಾಕಿಕೊಂಡು ಬಂದಿದ್ದಾರೆ. ಹಿಜಾಬ್ ವಿವಾದದ ಬಳಿಕ ವಿದ್ಯಾರ್ಥಿನಿಯರು ಸಮವಸ್ತ್ರದ ವೇಲನ್ನು ತಲೆ ಮೇಲೆ ಹಾಕಿಕೊಂಡು ಬರುತ್ತಿದ್ದು, ಇದಕ್ಕೆ ಕಾಲೇಜು ಪ್ರಾಂಶುಪಾಲರೂ ಸೇರಿದಂತೆ ಯಾರಿಂದಲೂ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಮಂಗಳವಾರ ಸ್ಥಳೀಯ ಗ್ರಾಪಂ ಸದಸ್ಯೆಯ ಪತಿ ಎನ್ನಲಾಗುತ್ತಿರುವ ಮಧು ಎಂಬಾತ ಕಾಲೇಜಿನಲ್ಲಿ ತರಗತಿ ನಡೆಯುತ್ತಿರುವ ವೇಳೆ ಕಾಲೇಜಿನ ಕೊಠಡಿಗೆ ಏಕಾಏಕಿ ಪ್ರವೇಶಿಸಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಕಳುಹಿಸಬೇಕೆಂದು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮೇಲೆ ಒತ್ತಡ ಹೇರಿ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ.

ಇದರಿಂದ ಬೆದರಿದ ಉಪನ್ಯಾಸಕರು ವಿದ್ಯಾರ್ಥಿನಿಯರು ತಲೆ ಮೇಲೆ ಧರಿಸಿದ್ದ ಸ್ಕಾರ್ಫ್ ಅನ್ನು ತೆಗೆಯಲು ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು, ನಾವು ಹಿಜಾಬ್ ಧರಿಸಿಲ್ಲ, ಸಮವಸ್ತ್ರದ ವೇಲು ಧರಿಸಿದ್ದೇವೆ. ಕಾಲೇಜಿನಿಂದ ನಾವು ಏಕೆ ಹೋಗಬೇಕು?, ಇಷ್ಟು ದಿನ ಈ ಬಗ್ಗೆ ಯಾರಿಂದಲೂ ಇದಕ್ಕೆ ವಿರೋಧ ಬಂದಿರಲಿಲ್ಲ. ಇದನ್ನು ವಿರೋಧಿಸಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ಕಾಲೇಜಿನ ಕೊಠಡಿಗೆ ಪ್ರವೇಶಿಸಿದ್ದ ಮಧು, ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಕಳುಹಿಸಲೇಬೇಕೆಂದು ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸಿದ್ದಾನೆ. ಇದರಿಂದ ಬೆದರಿದ ಕೆಲ ವಿದ್ಯಾರ್ಥಿನಿಯರು ಕಾಲೇಜು ಕೊಠಡಿಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

ಈ ವೇಳೇ ಇದೇ ಕಾಲೇಜಿನ ವಿದ್ಯಾರ್ಥಿ ಮುಬಾರಕ್ ಎಂಬವರು ಕಾಲೇಜು ಪ್ರಾಂಶುಪಾಲರ ಬಳಿ ತೆರಳಿ, ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ ವ್ಯಕ್ತಿ ಯಾರು? ಏಕಾಏಕಿ ಕಾಲೇಜು ಕೊಠಡಿ ಒಳಗೆ ಬರಲು ಅವಕಾಶ ನೀಡಿದವರು ಯಾರು? ಅವರಿಗೂ ಕಾಲೇಜಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾನೆ, ಇದಕ್ಕೆ ಪ್ರಾಂಶುಪಾಲರು, ಅವರು ಯಾರೆಂದು ತಿಳಿದಿಲ್ಲ. ನೀನೇ ಕೇಳು ಎಂದು ವಿದ್ಯಾರ್ಥಿಗೆ ಹೇಳಿದ್ದಾರೆ. ಆಗ ಮುಬಾರಕ್ ಗಲಾಟೆ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದ್ದು, ಆತ ಮುಬಾರಕ್ ಜೊತೆಗೂ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಮಧು ಅವರ ಸಹೋದರ ಮನೋಹರ್ ಎಂಬಾತ ಸ್ಥಳಕ್ಕೆ ಬಂದವನೇ, ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿಯೇ ಅವಕಾಶ ನೀಡಿದ್ದಾರೆ ಎಂದು ಮತ್ತೆ ಕಾಲೇಜು ಆವರಣದಲ್ಲಿ ಗಲಾಟ ಮಾಡಿದ್ದಾನೆ. ಅಲ್ಲದೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಕಳುಹಿಸಿ, ಇಲ್ಲವೇ ನಾವೇ ಹೊರಗೆ ಕಳುಹಿಸುತ್ತೇವೆಂದು ಕಾಲೇಜು ಸಿಬ್ಬಂದಿಗೂ ಬೆದರಿಕೆ ಹಾಕಿದ್ದಾನೆ.

ಬಳಿಕ ಇದನ್ನು ಪ್ರಶ್ನಿಸಿದ ಕಾಲೇಜು ವಿದ್ಯಾರ್ಥಿ ಮುಬಾರಕ್‍ನೊಂದಿಗೆ ವಾಗ್ವಾದ ನಡೆಸಿದ ಮನೋಹರ್, ಜೀವ ಬೆದರಿಕೆಯನ್ನೂ ಹಾಕಿದ್ದಾನೆಂದು ತಿಳಿದು ಬಂದಿದೆ. ಈ ವೇಳೆ ಮುಬಾರಕ್ 112 ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಹಿಜಾಬ್ ವಿಚಾರಕ್ಕೆ ಕಾಲೇಜು ಆವರಣದಲ್ಲಿ ಗೊಂದಲ ಸೃಷ್ಟಿಸಿದ್ದ ಸಹೋದರರಿಬ್ಬರನ್ನೂ ಅಲ್ಲಿಂದ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆ ಬಳಿಕ ಕಾಲೇಜು ವಿದ್ಯಾರ್ಥಿ ಮುಬಾರಕ್ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ತನಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆಂದು ತಿಳಿದು ಬಂದಿದೆ.

ಇಬ್ಬರು ವ್ಯಕ್ತಿಗಳು ಕಾಲೇಜು ಆವರಣ ಪ್ರವೇಶಿಸಿ ಗಲಾಟೆ ಮಾಡುತ್ತಿರುವುದು ಹಾಗೂ ವಿದ್ಯಾರ್ಥಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಹೋದರರಿಬ್ಬರ ನಡವಳಿಕೆ ಹಾಗೂ ಇವರ ವಿರುದ್ಧ ಕ್ರಮವಹಿಸದ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 


ಹಿಜಾಬ್ ವಿಚಾರಕ್ಕೆ ಮಂಗಳವಾರ ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಾಲೇಜು ಕೊಠಡಿ ಪ್ರವೇಶಿಸಿ ವಿದ್ಯಾರ್ಥಿನಿಯರು ಹಿಜಾಭ್ ಧರಿಸಿದ್ದಾರೆಂದು ಗಲಾಟೆ ಮಾಡಿ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಕಳುಹಿಸುವಂತೆ ಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಗೂ ಕಾಲೇಜಿಗೂ ಯಾವುದೇ ಸಂಬಂಧ ಇಲ್ಲ. ಪ್ರಶ್ನಿಸಿದಾಗ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂದು ಹೇಳಿದ್ದಾರೆ. ಕಾಲೇಜಿಗೆ ಸಂಬಂಧಿಸಿದ ವ್ಯಕ್ತಿ ಏಕಾಏಕಿ ಕೊಠಡಿ ಪ್ರವೇಶಕ್ಕೆ ಅವಕಾಶವಿಲ್ಲದಿದ್ದರೂ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ. ಕೆಲ ಹೊತ್ತಿನ ಬಳಿಕ ಮತ್ತೋರ್ವ ವ್ಯಕ್ತಿ ಬಂದು ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನಿನ್ನ ಮನೆ ಎಲ್ಲಿದೆ, ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದು, ಈತನ ವಿರುದ್ಧ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ ಠಾಣೆಯ ಎಎಸ್ಸೈ ತಾನು ನೀಡಿರುವ ದೂರನ್ನೇ ತಿರುಚಿದ್ದು, ಬುಧವಾರ ಠಾಣೆಗೆ ಬರಲು ಹೇಳಿ ಕಳುಹಿಸಿದ್ದಾರೆ. 

- ಮುಬಾರಕ್, ಮೂಗ್ತಿಹಳ್ಳಿ ಕಾಲೇಜಿ ವಿದ್ಯಾರ್ಥಿ

ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿರುವ ಇಬ್ಬರು ವ್ಯಕ್ತಿಗಳು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳನ್ನು ನಿಂದಿಸಿ ಓರ್ವ ವಿದ್ಯಾರ್ಥಿಗೆ ಜೀವಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಗಳಿಗೂ ಕಾಲೇಜಿಗೂ ಯಾವ ಸಂಬಂಧವೂ ಇಲ್ಲದಿದ್ದರೂ ಇವರನ್ನು ಕಾಲೇಜಿನಲ್ಲಿ ಗಲಾಟೆ ಮಾಡಲು ಅವಕಾಶ ನೀಡಿದ ಕಾಲೇಜಿ ಪ್ರಾಂಶುಪಾಲರ ವಿರುದ್ಧ ಕ್ರಮವಹಿಸಬೇಕು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರೂ ಗಲಾಟೆ ಮಾಡಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದವರನ್ನು ಬಂಧಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಜೀವಬೆದರಿಕೆ ಹಾಕಿದವರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಕೂಡಲೇ ಈ ಸಂಬಂಧ ಕಾನೂನು ಕ್ರಮವಹಿಸಬೇಕು. ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.

- ಗೌಸ್ ಮೊಹಿದ್ದೀನ್, ಸಂವಿಧಾನ ರಕ್ಷಣಾ ಸಮಿತಿ ಸಂಚಾಲಕ


 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News