ಹೆಣ್ಣು ಜೀವಮಾನವೀಡಿ ಬದುಕಿಗಾಗಿ ಹೋರಾಡುತ್ತಾಳೆ: ಶಾಸಕಿ ಅಂಜಲಿ ನಿಂಬಾಳ್ಕರ್
ಬೆಂಗಳೂರು, ಮಾ.8: ಏಳು ತಿಂಗಳ ಅವಧಿಯಲ್ಲಿ ಜನಿಸುವಂತಹ ಗಂಡು ಮಕ್ಕಳ ಪೈಕಿ ಹೆಣ್ಣು ಮಕ್ಕಳು ಹೆಚ್ಚು ಪ್ರತಿರೋಧ ಶಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ತಮ್ಮ ಜೀವನಕ್ಕಾಗಿ ಹೋರಾಡಲು ಶಕ್ತರಾಗಿರುತ್ತಾರೆ. ಆದರೆ, ಗಂಡು ಮಕ್ಕಳಲ್ಲಿ ಅಂತಹ ಪ್ರತಿರೋಧ ಶಕ್ತಿ ಕಂಡು ಬರುವುದಿಲ್ಲ ಎಂಬುದನ್ನು ಓರ್ವ ವೈದ್ಯೆಯಾಗಿ ನಾನು ಈ ಮಾತನ್ನು ಹೇಳುತ್ತೇನೆ ಎಂದು ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಎನ್‍ಐಸಿಯುನಲ್ಲಿ ಆರಂಭವಾಗುವ ಆಕೆಯ ಹೋರಾಟ ಇಡೀ ಜೀವಮಾನ ಇರುತ್ತದೆ. ಮನೆಯಲ್ಲಿ ಹೆಣ್ಣು ಮಗು ಜನಿಸಿದ ಕೂಡಲೆ ಎಲ್ಲರೂ ಲಕ್ಷ್ಮಿಯ ಆಗಮನವಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ. ಆದರೆ, ಆಕೆಯ ಶಿಕ್ಷಣಕ್ಕಿಂತ ಹೆಚ್ಚಾಗಿ ಆಕೆಯ ವಿವಾಹಕ್ಕಾಗಿ ಹಣ ಹೊಂದಿಸುವಲ್ಲಿ ಪೋಷಕರು ತಲ್ಲೀನರಾಗುತ್ತಾರೆ ಎಂದರು.
ಇವತ್ತು ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಮಗೆ ನೀವೆಲ್ಲ ಶುಭಕೋರಿದ್ದೀರಾ. ಆದರೆ, ಮುಖ್ಯಮಂತ್ರಿ ಮಂಡಿಸಿರುವ ಈ ಬಜೆಟ್‍ನಲ್ಲಿ ಹೆಣ್ಣು ಮಗುವಿಗೆ ಸಂಬಂಧಿಸಿದ ಒಂದೇ ಒಂದು ಪದವೂ ಇಲ್ಲ ಎಂದು ಅಂಜಲಿ ನಿಂಬಾಳ್ಕರ್ ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇವತ್ತು ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆಯಿದೆ. ವಿಶ್ವಸಂಸ್ಥೆಯವರು ಈ ವರ್ಷ ‘ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ’ ಎಂಬ ಧ್ಯೇಯವನ್ನು ನೀಡಿದ್ದಾರೆ. ಆ ವಿಷಯವನ್ನು ಕೇಂದ್ರೀಕರಿಸಿಕೊಂಡು ನೀವು ಮಾತನಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಂಜಲಿ ನಿಂಬಾಳ್ಕರ್, ಯಾವು ಯಾಕೆ ಸಂತೋಷ ಪಡಬೇಕು ಸರ್. ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಾವು ನಗುತ್ತೇವೆ. ಇವತ್ತು ಅಂತರ್‍ರಾಷ್ಟ್ರೀಯ ಮಹಿಳಾ ದಿನಾಚರಣೆ. ನೀವು ನಮಗೆ ಅಭಿನಂದಿಸಿದಂತೆ ಪುರುಷರಿಗೂ ಅಭಿನಂದಿಸಬೇಕು. ಏಕೆಂದರೆ ಅವರ ಪತ್ನಿಯರು ಅವರ ಮನೆ, ಸಂಸಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅದರಿಂದಾಗಿ, ಅವರು ಇಲ್ಲಿ ಕೂತಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಮಹಿಳೆಯರ ಸಬಲೀಕರಣದಲ್ಲಿ ಬದಲಾವಣೆಯನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಸ್ತ್ರೀ ಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಕೌಶಲ್ಯ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಯಾವುದೆ ಸರಕಾರ ಅಧಿಕಾರಕ್ಕೆ ಬಂದರೂ ಮಹಿಳೆಯರ ಆರೋಗ್ಯ, ಚಿಕಿತ್ಸೆ, ಶಿಕ್ಷಣಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು. ಯುವಕರಿಗೆ ಹೇಗೆ ಉದ್ಯೋಗಗಳಲ್ಲಿ ಅವಕಾಶ ನೀಡುತ್ತೀವೋ ಅದೇ ರೀತಿ ಯುವತಿಯರಿಗೂ ಅವಕಾಶಗಳನ್ನು ಕಲ್ಪಿಸಬೇಕು ಎಂದರು.
ಮಹಿಳಾ ಜನಪ್ರತಿನಿಧಿಗಳಾದ ನಾವು ಸಮಾಜದಲ್ಲಿನ ಸಾಮಾನ್ಯ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಯ್ಕೆಯಾಗಿ ಬರಲು ನಮ್ಮ ಮಾವನವರಾದ ಎಚ್.ಡಿ.ದೇವೇಗೌಡರು ಕಾರಣ. ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ ಪರಿಣಾಮ ನಾವು ನೋಡುತ್ತಿದ್ದೇವೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.
ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹಿಳೆಯರು ಇವತ್ತು ಎಲ್ಲ ರಂಗಗಳಲ್ಲಿ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಆಟೋ ಚಾಲನೆ ಮಾಡುವುದರಿಂದ ಯುದ್ಧ ವಿಮಾನವನ್ನು ಹಾರಿಸುವಷ್ಟರ ಮಟ್ಟಿಗೆ ಮಹಿಳೆಯರು ಮುಂದೆ ಬಂದಿದ್ದಾರೆ. ಆದರೂ, ಕೆಲವು ಕಡೆ ಹೆಣ್ಣು ಮಕ್ಕಳು ನೋವು ಎದುರಿಸುವ ಪ್ರಸಂಗಗಳು ಜರಗುತ್ತಿರುತ್ತವೆ ಎಂದರು.
ಮಹಿಳೆಯರಿಗೆ ಶಕ್ತಿ ತುಂಬಲು ಕಳೆದ ಬಾರಿ ಯಡಿಯೂರಪ್ಪನವರು ಮಹಿಳಾ ದಿನಾಚರಣೆಯಂದೆ ಮಹಿಳಾ ಬಜೆಟ್ ಮಂಡನೆ ಮಾಡಿದರು. ಅಲ್ಲದೆ, ಸ್ಥಗಿತವಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್‍ಗಳನ್ನು ವಿತರಿಸಲು ಕ್ರಮ ತೆಗೆದುಕೊಂಡರು ಎಂದು ಅವರು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್, ಸರ್ ಇದು ರಾಜಕೀಯ ಭಾಷಣ ಅಲ್ಲವೇ? ಎಂದು ಸ್ಪೀಕರ್‍ಗೆ ಪ್ರಶ್ನಿಸಿದರು.
ಇದೆಲ್ಲ ಹೇಳಲು ನೀವು ಅವಕಾಶ ಕೊಟ್ಟರೆ, ನಾನು ಹೇಳಬಹುದಾಗಿತ್ತು. ಉತ್ತರಪ್ರದೇಶದಲ್ಲಿ ನಮ್ಮ ನಾಯಕಿ ಪ್ರಿಯಾಂಕ ಗಾಂಧಿ ಮಹಿಳೆಯರಿಗೆ ಚುನಾವಣೆಯಲ್ಲಿ ಶೇ.40ರಷ್ಟು ಸೀಟುಗಳನ್ನು ನೀಡಿದ್ದಾರೆ ಎಂದು. ‘ಮೈ ಲಡ್ಕೀ ಹೂಂ ಮೈ ಲಡ್ ಸಕ್ತಿ ಹೂಂ’ ಎಂದರು. ಶಾಸಕಿಯರಾದ ರೂಪಕಲಾ ಹಾಗೂ ಕುಸುಮಾವತಿ ಮಾತನಾಡಿದರು.
ಹೆಣ್ಣು ಮಕ್ಕಳು ಪ್ರಾಮಾಣಿಕರಾಗಿರುತ್ತಾರೆ. ಆದುದರಿಂದ, ಕಟು ಸತ್ಯವನ್ನು ಹೇಳಲು ಹಿಂಜರಿಯುವುದಿಲ್ಲ. ಮಹಿಳೆಯರು ಶ್ರಮಜೀವಿಗಳು. ಅವರು ತಮಗೆ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾರೆ. ಆರ್ಥಿಕತೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿದ್ದರೂ ತಮ್ಮ ಬಳಿಯಿರುವ ದುಡ್ಡಿನಲ್ಲೆ ಉಳಿತಾಯ ಮಾಡುವ ಗುಣ ಅವರಲ್ಲಿರುತ್ತದೆ. ಮಹಿಳೆಯರಲ್ಲಿನ ಪ್ರಾಮಾಣಿಕತೆ, ಶ್ರಮ ಹಾಗೂ ಉಳಿತಾಯದ ಗುಣ. ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು ಉಳಿಸುವಲ್ಲಿ ಸಹಕಾರಿಯಾಗಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ