ಗುಜರಾತ್, ರಾಜಸ್ಥಾನ ಹೆಚ್ಚು ಹಿಂದುಳಿದ ರಾಜ್ಯಗಳು: ಸಚಿವ ಮಾಧುಸ್ವಾಮಿ

Update: 2022-03-09 13:00 GMT

ಬೆಂಗಳೂರು, ಮಾ. 9: ‘ಗುಜರಾತ್ ಮತ್ತು ರಾಜಸ್ಥಾನ ಹೆಚ್ಚು ಮರುಭೂಮಿ ಹೊಂದಿದ್ದು, ಹಿಂದುಳಿದ ರಾಜ್ಯಗಳಾಗಿವೆ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಯ ವೇಳೆ ‘ಕೇಂದ್ರ ಅನುದಾನದ ತಾರತಮ್ಯ ಮಾಡಲಾಗುತ್ತಿದೆ' ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಹಿಂದುಳಿದ ರಾಜ್ಯಗಳ ಅಭಿವೃದ್ದಿಗೆ ಕೇಂದ್ರ ಸರಕಾರ ಹೆಚ್ಚು ಅನುದಾನ ನೀಡುತ್ತದೆ. ಎಲ್ಲರಿಗೂ ಸಮಾನವಾಗಿ ಹಂಚಬೇಕೆಂಬ ನಿಯಮವೇನು ಇಲ್ಲ, ಅದನ್ನು ಸಂವಿಧಾನದಲ್ಲಿಯೂ ಉಲ್ಲೇಖಿಸಿಲ್ಲ' ಎಂದು ಹೇಳಿದರು.

ಈ ಹಂತದಲ್ಲಿ ಮಧ್ಯೆಪ್ರವೇಶಿಸಿದ ಜೆಡಿಎಸ್‍ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ, ‘ಗುಜರಾತ್ ರಾಜ್ಯವೂ ಅತಿ ಹಿಂದುಳಿದಿದೆಯೇ? ಅದಕ್ಕೆ ಹೆಚ್ಚು ಅನುದಾನ ಕೊಡುತ್ತಿಲ್ಲವೇ?’ ಎಂದು ಪ್ರಶ್ನಿಸಿದರು. ‘ಹೌದು ಗುಜರಾತ್ ಹಿಂದುಳಿದ ರಾಜ್ಯವೇ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಮರುಭೂಮಿ ಪ್ರದೇಶವಿದೆ' ಎಂದು ಮಾಧುಸ್ವಾಮಿ ಸಮರ್ಥನೆ ನೀಡಿದರು.

ಈ ವೇಳೆ ಎದ್ದುನಿಂದ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್, ‘ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯ. ದೇಶದಲ್ಲೆ ಉತ್ತಮ ರಾಜ್ಯ ಎಂದು ಹೇಳುತ್ತಿದ್ದರು’ ಎಂದು ಛೇಡಿಸಿದರು. ಆರಂಭದಲ್ಲೇ ಮಾತನಾಡಿದ ಕುಮಾರಸ್ವಾಮಿ, ‘ಕೇಂದ್ರದ ಅನುದಾನ ಹಂಚಿಕೆಯಲ್ಲಿ ಇಳಿಕೆಯಾಗಿದೆ. ಕೇಂದ್ರಕ್ಕೆ ಅನುಕಂಪ ತೋರಿಸಲು ರಾಜಸ್ವ ಕೊರತೆಯನ್ನು 14 ಸಾವಿರ ಕೋಟಿ ರೂ.ತೋರಿಸಲಾಗಿದೆಯೇ?’ ಎಂದು ಪ್ರಶ್ನಿಸಿದರು.

ಜಿಎಸ್ಟಿ ಜಾರಿ ಬಳಿಕ ರಾಜ್ಯಕ್ಕೆ ತೆರಿಗೆ ವಿಧಿಸುವ ಅವಕಾಶವೇ ಇಲ್ಲದಂತಾಗಿದೆ. ಎಲ್ಲವನ್ನು ಕೇಂದ್ರ ಸರಕಾರ ಪಡೆಯುತ್ತಿದ್ದು, ರಾಜ್ಯದಿಂದ ಸಂಗ್ರಹಿಸಿದ 100 ರೂ.ನಲ್ಲಿ ರಾಜ್ಯಕ್ಕೆ 40 ರೂ.ಗಳನ್ನಷ್ಟೇ ಕೇಂದ್ರ ಕೊಡುತ್ತದೆ. ಆದರೆ, ರಾಜಸ್ಥಾನ, ಗುಜರಾತ್ ಹಾಗೂ ಉತ್ತರಪ್ರದೇಶಕ್ಕೆ ಹೆಚ್ಚು ಅನುದಾನ ನೀಡುತ್ತದೆ. ಆ ರಾಜ್ಯಗಳ ಜನಸಂಖ್ಯೆ ಆಧರಿಸಿ ಕೊಡುತ್ತಿರಬಹುದು. ನಮ್ಮದು ಸಂಪತ್ಭರಿತ ರಾಜ್ಯ. ಸರಿಯಾಗಿ ತೆರಿಗೆ ಪಾವತಿಸುವುದೇ ಸರಿಯಲ್ಲ ಎಂಬ ಚರ್ಚೆ ಜನರಲ್ಲಿದೆ. ಕೇಂದ್ರ ಮಾಡುತ್ತಿರುವ ತಾರತಮ್ಯದಿಂದಾಗಿ ಈ ಭಾವನೆ ಬಂದಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಗುಜರಾತ್ ಮಾಡೆಲ್.. ಸುಳ್ಳೆ?

‘ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯ. ದೇಶದಲ್ಲೆ ಉತ್ತಮ ರಾಜ್ಯ ಎಂದು ಹೇಳುತ್ತಿದ್ದರು. ಹಾಗಾದರೆ ಅದು ಸುಳ್ಳೆ?’

-ಯು.ಟಿ.ಖಾದರ್, ಪ್ರತಿಪಕ್ಷ ಉಪನಾಯಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News