×
Ad

ಮೇಕೆದಾಟು ಯೋಜನೆಗೆ ಕೂಡಲೇ ಕೇಂದ್ರ ಪರಿಸರ ಇಲಾಖೆ ಅನುಮತಿ ಕೊಡಿ: ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ

Update: 2022-03-09 18:52 IST

ಬೆಂಗಳೂರು, ಮಾ. 9: ‘ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಕೇಂದ್ರ ಸಂಪುಟದ ಸಹೋದ್ಯೋಗಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ನೀಡಿರುವ ಹೇಳಿಕೆ ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದೆ. ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡದೆ ಸತಾಯಿಸುತ್ತಿರುವ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬ್ಬಲ್ ಎಂಜಿನ್ ಸರಕಾರಗಳು ಕನ್ನಡಿಗರಿಗೆ ದ್ರೋಹ ಎಸಗಿವೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

‘2022ರ ಫೆ.5ರಂದು ಜಲಶಕ್ತಿ ಸಚಿವ ಶೇಖಾವತ್ ಅವರು ನೀಡಿದ ಹೇಳಿಕೆಯಲ್ಲಿ, ‘ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಒಟ್ಟಿಗೆ ಕುಳಿತು ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಎರಡೂ ರಾಜ್ಯಗಳೂ ಒಟ್ಟಿಗೆ ಕುಳಿತುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾತ್ರ ನಾವು ಒದಗಿಸಿಕೊಡುತ್ತೇವೆ' ಎಂದು ಹೇಳಿದ್ದಾರೆ. ಉಭಯ ರಾಜ್ಯಗಳೆ ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಾದರೆ, ಕೇಂದ್ರದ ಜಲ ಪ್ರಾಧಿಕಾರಗಳು ಮತ್ತಿತರ ಕೇಂದ್ರ ಮಟ್ಟದ ವ್ಯವಸ್ಥೆಗಳ ಅಗತ್ಯವಾದರೂ ಏನು? ಹೀಗಾಗಿ ಸಚಿವರ ಮಾತುಗಳು ಅತ್ಯಂತ ಬೇಜವಾಬ್ದಾರಿತನದ್ದಾಗಿವೆ' ಎಂದು ಸಿದ್ದರಾಮಯ್ಯ ಪತ್ರದಲ್ಲಿ ಟೀಕಿಸಿದ್ದಾರೆ.

‘ಕೇಂದ್ರ ಸಚಿವರ ಈ ಮಾತು ತಮಿಳುನಾಡನ್ನು ಓಲೈಸುವ ಮತ್ತು ಕನ್ನಡಿಗರ ಹಾದಿ ತಪ್ಪಿಸುವ ರಾಜಕೀಯ ಹೇಳಿಕೆಯಂತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಮಿಳುನಾಡಿಗೆ ಬಿಡಬೇಕಾದಷ್ಟು ನೀರನ್ನು ಹರಿಸಿದ ಬಳಿಕ ಉಳಿದ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಕರ್ನಾಟಕದ ಕಾನೂನಾತ್ಮಕ, ನೈತಿಕ ಮತ್ತು ತಾಂತ್ರಿಕ ಹಕ್ಕು. ಬೆಂಗಳೂರು ನಗರದ ಜನಸಂಖ್ಯೆ 1.5 ಕೋಟಿ ದಾಟಿದೆ. ಉಳಿದ 12 ಜಿಲ್ಲೆಗಳ 3.5 ಕೋಟಿ ಜನರ ವ್ಯಾಪ್ತಿಯಲ್ಲಿ ಕಾವೇರಿ ನೀರು ವಿತರಣೆಯಾಗುತ್ತಿದೆ. ದೇಶದ ಒಟ್ಟು ಆರ್ಥಿಕತೆ ಮತ್ತು ದೇಶದ ಒಟ್ಟು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಶೇ.30ರಷ್ಟು ಮಂದಿಗೆ ಮಾತ್ರ ಕಾವೇರಿ ಕುಡಿಯುವ ನೀರಿನ ಲಭ್ಯತೆ ಇದೆ. ಬೇಸಿಗೆ ಮತ್ತು ಬರಗಾಲದ ಸ್ಥಿತಿಯಲ್ಲಿ ಬೆಂಗಳೂರು ನಗದ ಜನರಿಗೆ ಕುಡಿಯುವ ನೀರಿನ ಅಭಾವ ಬಹಳ ಸಂಕಷ್ಟ ಸೃಷ್ಟಿಸಿದೆ. ಈ ಸಂಕಷ್ಟವನ್ನು ಪರಿಹರಿಸಲು ಮೇಕೆದಾಟು ಯೋಜನೆ ಜಾರಿ ಆಗುವುದು ಅತ್ಯಗತ್ಯ ಮತ್ತು ಮುಂದಿನ 50 ವರ್ಷಗಳ ನೀರಿನ ಅಗತ್ಯವನ್ನು ಈ ಯೋಜನೆ ಪೂರೈಸುತ್ತದೆ' ಎಂದು ಅವರು ತಿಳಿಸಿದ್ದಾರೆ.

‘ಮಹತ್ವದ ಯೋಜನೆಗೆ ಕೇಂದ್ರ ಸರಕಾರ ಅನುಮತಿ ಕೊಡದೆ ಸತಾಯಿಸುತ್ತಿರುವುದಲ್ಲದೆ ಸಚಿವ ಶೇಖಾವತ್ ಅವರು ನಮ್ಮ ಕುಡಿಯುವ ನೀರಿನ ಮಹತ್ವವನ್ನು ಅರಿಯದೆ ಅತ್ಯಂತ ನಿರ್ಲಕ್ಷ್ಯತನದಿಂದ ಮಾತನಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕೂಡಲೇ ಕೇಂದ್ರ ಸರಕಾರ ಕಾಲಹರಣ ಮಾಡದೆ ತಕ್ಷಣ ಪರಿಸರ ಅನುಮತಿ ಕೊಡಬೇಕು. ನೆಪಗಳನ್ನು ಹೇಳಿಕೊಂಡು ರಾಜಕಾರಣ ಮಾಡದೆ ಮೇಕೆದಾಟು ಯೋಜನೆ ಜಾರಿ ಆಗಿ ಕೆಲಸ ಆರಂಭಿಸಬೇಕು' ಎಂದು ಸಿದ್ದರಾಮಯ್ಯ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News