×
Ad

ಎಫ್‍ಎಸ್‍ಎಲ್ ಖಾಲಿ ಹುದ್ದೆ ಭರ್ತಿ: ಹೈಕೋರ್ಟ್ ಗೆ ಮಾಹಿತಿ

Update: 2022-03-09 18:54 IST

ಬೆಂಗಳೂರು, ಮಾ.9: ‘ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ(ಎಫ್‍ಎಸ್‍ಎಲ್) ಖಾಲಿ ಇದ್ದ ಜಂಟಿ ನಿರ್ದೇಶಕ, ಉಪ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ತಿಳಿಸಿದೆ.

ಈ ಕುರಿತ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಹೆಚ್ಚುವರಿ ಸರಕಾರಿ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು ಹುದ್ದೆ ಭರ್ತಿ ಕುರಿತಂತೆ ನ್ಯಾಯಪೀಠಕ್ಕೆ ವಿವರಿಸಿ, ‘2021ರ ಆಗಸ್ಟ್ 13ರಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ನಿರ್ದೇಶನದಂತೆ ಎಫ್‍ಎಸ್‍ಎಲ್‍ಗಳಲ್ಲಿ ಖಾಲಿ ಇದ್ದ ಜಂಟಿ ನಿರ್ದೇಶಕ, ಉಪ ನಿರ್ದೇಶಕ, ಸಹಾಯಕ ನಿರ್ದೇಶಕ ಹಾಗೂ ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ಸಂಬಂಧ ಕಳೆದ ತಿಂಗಳ 25ರಂದು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಇನ್ನೂ ಕೆಲ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಮತ್ತಷ್ಟು ಕಾಲಾವಕಾಶ ಕಲ್ಪಿಸಿದರೆ, ಶೀಘ್ರವೇ ನೇಮಕಾತಿ ನಡೆಸಲಾಗುವುದು’ ಎಂದು ತಿಳಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಉಳಿದಿರುವ ಖಾಲಿ ಹುದ್ದೆಗಳ ಭರ್ತಿಗಾಗಿ ಅಗತ್ಯ ನೇಮಕಾತಿಗಳನ್ನು ನಡೆಸಲು ಆರು ವಾರಗಳ ಕಾಲಾವಕಾಶ ನೀಡಿ, ವಿಚಾರಣೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News