ಎಲ್‍ಎಲ್, ಡಿಎಲ್ ಇನ್ನು ಆನ್‍ಲೈನ್‍ನಲ್ಲೇ ಸಿಗಲಿವೆ: ಸಚಿವ ಬಿ.ಶ್ರೀರಾಮುಲು

Update: 2022-03-09 13:28 GMT

ಬೆಂಗಳೂರು, ಮಾ. 9: ‘ರಾಜ್ಯದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ(ಎಆರ್‍ಟಿಒ) ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ(ಆರ್‍ಟಿಒ)ಯ ಸೇವೆಗಳನ್ನು ಆನ್‍ಲೈನ್‍ನಲ್ಲೇ ಒದಗಿಸಲಾಗುತ್ತಿದ್ದು, ಆರ್‍ಟಿಒ ಕಚೇರಿಗಳನ್ನು ಕಾಗದಮುಕ್ತ ಮಾಡಲಾಗುತ್ತಿದೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವಿಧಾನಸಭೆಗೆ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಹೂಲಗೇರಿ ಡಿ.ಎಸ್. ಅವರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಆರ್‍ಟಿಒ ಮತ್ತು ಆರ್‍ಟಿಒ ಕಚೇರಿಗಳಲ್ಲಿ ಸೇವೆಗಳನ್ನು ಆನ್‍ಲೈನ್ ಮೂಲಕ ನೀಡುತ್ತಿದ್ದೇವೆ. ಎಲ್.ಎಲ್. ಮತ್ತು ಡಿ.ಎಲ್ ಸೇರಿದಂತೆ ಎಲ್ಲವೂ ಈಗ ಆನ್‍ಲೈನ್‍ನಲ್ಲೇ ಲಭ್ಯ ಇರುವುದರಿಂದ ಕಾಗದ ಮುಕ್ತವಾಗಿದೆ. ಈ ಕಚೇರಿಗಳಿಗೆ ಸಾರ್ವಜನಿಕರ ಭೇಟಿಯೂ ಗಣನೀಯವಾಗಿ ಕಡಿಮೆಯಾಗುತ್ತದೆ' ಎಂದು ತಿಳಿಸಿದರು.

ರಾಜ್ಯದಲ್ಲಿ ಹೊಸದಾಗಿ ಸಹಾಯಕ/ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ, ಸಿಂಧಗಿ ಅಥವಾ ಇಂಡಿ ಪಟ್ಟಣ, ದಾವಣಗೆರೆ ಜಿಲ್ಲೆಯ ಹೊನ್ನಾಳಿ/ಚೆನ್ನಗಿರಿ, ಕಲುಬುರಗಿ ಜಿಲ್ಲೆಯ ಸೇಡಂ, ರಾಯಚೂರಿನ ಸಿಂಧನೂರು/ಲಿಂಗಸೂರು, ಉಡುಪಿಯ ಕುಂದಾಪುರ ತಾಲೂಕಿನಲ್ಲಿ ಸ್ಥಾಪನೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ರಾಯಚೂರು ಜಿಲ್ಲೆಯ ಲಿಂಗಸೂರು ಅಥವಾ ಸಿಂಧನೂರಿನಲ್ಲಿ ಎಆರ್‍ಟಿ, ಆರ್‍ಟಿಒ ಕಚೇರಿಗಳನ್ನು ತೆರೆಯಲು ಹೆಚ್ಚಿನ ಬೇಡಿಕೆ ಬಂದಿದೆ. ಇದೇ ರೀತಿ ರಾಜ್ಯಾದ್ಯಂತ ತೆರೆಯಬೇಕೆಂಬ ಒತ್ತಡವೂ ಇದೆ. ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ಹಂತ ಹಂತವಾಗಿ ಪ್ರಾರಂಭಿಸುವುದು ಎಂದು ಸಚಿವ ಶ್ರೀರಾಮುಲು ಸದನಕ್ಕೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News