ವಿದ್ಯಾರ್ಥಿ ನವೀನ್ ಮೃತದೇಹ ತರಲು ಪ್ರಯತ್ನಿಸಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಬೆಂಗಳೂರು, ಮಾ. 9: ‘ಉಕ್ರೇನ್‍ನಲ್ಲಿ ಸಾವನ್ನಪ್ಪಿದ ವೈದ್ಯಕೀಯ ವಿದ್ಯಾರ್ಥಿ ನವೀನ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ಕೂಡಲೇ ಆತನ ಮೃತದೇಹವನ್ನು ರಾಜ್ಯಕ್ಕೆ ತರಲು ಶ್ರಮಿಸಬೇಕು. ವಿದೇಶಾಂಗ ವ್ಯವಹಾರಗಳ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ, ಆದರೆ, ಈ ಘಟನೆಯಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೀನ್ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದರೂ, ನೀಟ್ ಪರೀಕ್ಷೆಯಲ್ಲಿ ಸರಕಾರಿ ಕೋಟದಡಿಯಲ್ಲಿ ವೈದ್ಯಕೀಯ ಮೆಡಿಕಲ್ ಸೀಟು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ವಿದೇಶಕ್ಕೆ ಹೋಗಬೇಕಾಯಿತು. ಹಾವೇರಿ ಜಿಲ್ಲೆಯ ಚಳಗೇರಿಯಿಂದಲೇ ನವೀನ್, ಅಮಿತ್, ಸುಮನ್ ಎಂಬ ಮೂವರು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಓದುತ್ತಿದ್ದರು. ಆ ಪೈಕಿ ಇಬ್ಬರು ಮಾತ್ರ ಬದುಕುಳಿದು ಮರಳಿ ಬಂದಿದ್ದಾರೆ. ಅಮಿತ್ ಮತ್ತು ನವೀನ್ ಯುದ್ಧ ನಡೆಯುವ ವೇಳೆ ಬಂಕರ್‍ನಲ್ಲಿ ಇದ್ದರು, ಬೆಳಗ್ಗೆ ಆಹಾರ ತರಲು ರೆಸ್ಟೋರೆಂಟ್ ಬಳಿ ನಿಂತಿದ್ದಾಗ ಶೆಲ್ ದಾಳಿಗೆ ನವೀನ್ ಮೃತಪಟ್ಟಿದ್ದಾರೆ. ಅವರ ತಂದೆ ನಂಜನಗೂಡು ಬಳಿಯ ಪೇಪರ್ ಮಿಲ್‍ನಲ್ಲಿ ಕೆಲಸದಲ್ಲಿದ್ದರು ಎಂದು ತಿಳಿಸಿದರು.
‘ಶೆಲ್ ದಾಳಿಗೆ ಸಿಕ್ಕಿ ನವೀನ್ ದುರ್ಮರಣಕ್ಕೀಡಾಗಿದ್ದು, ಇದು ನಾಡಿಗೆ ಆದ ನಷ್ಟ. ಮಾರ್ಚ್ 1ಕ್ಕೆ ದಾಳಿಗೆ ಬಲಿಯಾಗಿದ್ದರೂ ಈವರೆಗೆ ನವೀನ್ ಮೃತದೇಹವನ್ನು ಕುಟುಂಬದವರಿಗೆ ನೀಡಿಲ್ಲ. ತಂದೆ-ತಾಯಿಗೆ ಕಡೇ ಬಾರಿ ಮಗನ ಮುಖ ನೋಡುವ ಆಸೆಯಿರುತ್ತದೆ. ವಿದೇಶಾಂಗ ಸಚಿವಾಲಯ ಮೃತದೇಹ ತರುವ ಕೆಲಸ ಮಾಡಬೇಕಿತ್ತು, ಮಾಡಿಲ್ಲ' ಎಂದು ದೂರಿದರು.
‘ಎಲ್ಲ್ಲ ದೇಶಗಳ ಜನರು ವಿದೇಶಗಳಿಗೆ ಹೋಗಿ ವ್ಯಾಸಂಗ ಮಾಡುವುದು ಸಹಜ. ಹಾಗೆಯೇ ನವೀನ್ ಹೋಗಿದ್ದರು. ಕೇಂದ್ರ ಸರಕಾರ ಜವಾಬ್ದಾರಿಯಿಂದ ನಡೆದುಕೊಂಡಂತೆ ಕಾಣುತ್ತಿಲ್ಲ. ಇದು ರಾಜಕೀಯ ಕಾರಣಕ್ಕಾಗಿ ಹೇಳುತ್ತಿರುವ ಮಾತಲ್ಲ. ರಶ್ಯಾ ದೇಶ ಉಕ್ರೇನ್ ಮೇಲೆ ದಾಳಿ ಮಾಡಲಿದೆ ಎಂಬ ವಿಚಾರ ಬಹಳ ದಿನಗಳಿಂದ ಚರ್ಚೆಯಾಗುತ್ತಿತ್ತು. ಈ ಬಗ್ಗೆ ವಿದೇಶಾಂಗ ಕಚೇರಿಗೂ ಮಾಹಿತಿ ಇರುತ್ತದೆ. ಯುದ್ಧ ಪ್ರಾರಂಭವಾಗುವ ಮೊದಲೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಅಲ್ಲಿರುವ ಭಾರತೀಯರನ್ನು ತವರಿಗೆ ಕರೆತರಬೇಕಿತ್ತು' ಎಂದು ಆಗ್ರಹಿಸಿದರು.
‘ಕೂಡಲೇ ನವೀನ್ ಅವರ ಮೃತದೇಹವನ್ನು ಭಾರತಕ್ಕೆ ತರಿಸುವ ಕೆಲಸ ಮಾಡಬೇಕೆಂದು ವಿದೇಶಾಂಗ ಮಂತ್ರಿ ಮತ್ತು ಕೇಂದ್ರಕ್ಕೆ ಒತ್ತಾಯಿಸುತ್ತೇನೆ. ಕೋಳಿವಾಡ ಅವರ ಪುತ್ರ ಈ ತಿಂಗಳ ಒಂದರಂದೇ ವಿದೇಶಾಂಗ ಇಲಾಖೆಗೆ ಪತ್ರ ಬರೆದು ವಿಮಾನ ನಮ್ಮ ಬಳಿಯೇ ಇದೆ, ನಾವು ಮೃತದೇಹವನ್ನು ತರುವ ವ್ಯವಸ್ಥೆ ಮಾಡುತ್ತೇವೆ, ನಮಗೆ ಅನುಮತಿ ನೀಡಿ ಎಂದು ಕೇಳಿದ್ದರು. ಆ ಪತ್ರಕ್ಕೆ ಇವತ್ತಿನವರೆಗೆ ಉತ್ತರ ಬಂದಿಲ್ಲ. ಇದರಲ್ಲೇ ಈ ವಿಷಯದಲ್ಲಿ ಕೇಂದ್ರ ಸರಕಾರ ಎಷ್ಟು ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂಬುದು ಕಾಣುತ್ತದೆ. ವಿದೇಶಾಂಗ ಸಚಿವಾಲಯದ ಅಜಾಗರೂಕತೆಯಿಂದ ನವೀನ್ ಪ್ರಾಣ ಹೋಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸೀಟು ಸಿಗದವರು ಬೇರೆ ದೇಶಕ್ಕೆ ಹೋಗುತ್ತಾರೆ. ಬೇರೆ ದೇಶದ ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಾರೆ. ಇದೆಲ್ಲಾ ಸಾಮಾನ್ಯ ಸಂಗತಿ. ನೀಟ್ ಪರೀಕ್ಷೆಯ ಅಂಕ ಮೆಡಿಕಲ್ ಸೀಟ್ ಸಿಗಲು ಮುಖ್ಯ. ಶಿಕ್ಷಣ ವ್ಯವಸ್ಥೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಇದು ಸೂಕ್ತ ಸಮಯವಲ್ಲ. ಬೇರೊಂದು ಸಮಯದಲ್ಲಿ ಈ ಬಗ್ಗೆ ಮಾತನಾಡೋಣ' ಎಂದು ತಿಳಿಸಿದರು.
‘ಹಿಜಾಬ್(ಸ್ಕಾರ್ಫ್) ವಿವಾದ ಕೋರ್ಟ್‍ನಲ್ಲಿದೆ. ತೀರ್ಪು ಬಂದ ಮೇಲೆ ಮಾತನಾಡುತ್ತೇನೆ. ಮೊದಲು ಕೇಸರಿ ಶಾಲು ಹಾಕೊಂಡು ಮಕ್ಕಳು ಶಾಲೆಗೆ ಬರುತ್ತಿರುವವರಿಂದ ಈ ವಿವಾದ ಹುಟ್ಟುಹಾಕಿದ್ದು, ಅದು ನಿಲ್ಲಬೇಕು. ಕೋರ್ಟ್ ತೀರ್ಪು ಏನು ಬರುತ್ತದೆಯೋ ಕಾದು ನೋಡೋಣ'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ