ಜಾನುವಾರುಗಳಿಗೆ ಕೂಡಲೇ ಚಿಕಿತ್ಸೆ: ಸಚಿವ ಪ್ರಭು ಚವ್ಹಾಣ್

Update: 2022-03-09 14:47 GMT

ಬೆಂಗಳೂರು: ರಾಜ್ಯದಲ್ಲಿ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಉತ್ತರಿಸಿದರು.

ವಿಧಾನ ಪರಿಷತ್ತಿನಲ್ಲಿ ಸದಸ್ಯ ಸುನೀಲ್ ವಲ್ಯಾಪುರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮುಖೇನ ಭರ್ತಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು ಮತ್ತು ನೌಕರರು ಹುದ್ದೆಗಳನ್ನು ಮುಂಬಡ್ತಿ ಮತ್ತು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಧಿಕ ಪ್ರಭಾರ ವ್ಯವಸ್ಥೆ ಮಾಡಿ ಅನಾರೋಗ್ಯ ಪೀಡಿತ ರೈತರ ಜಾನುವಾರುಗಳಿಗೆ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡುವಂತೆ ಅಧಿಕ ಪ್ರಭಾರದಡಿಯಲ್ಲಿ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ್ ವಿವರಿಸಿದರು.
ರೈತರ ಜಾನುವಾರುಗಳ ಸಮಸ್ಯೆ ಆಲಿಸಲು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಹಾಯವಾಣಿ ಕೇಂದ್ರ ಪ್ರಾರಂಭಿಸಲಾಗಿದ್ದು, ಅಲ್ಲಿಗೆ ಬರುವ ಕರೆಗಳು ಹಾಗೂ ಸಮಸ್ಯೆಗಳ ಆಧಾರದಲ್ಲಿ ಸಂಚಾರಿ ಪಶು ಸಂಜೀವಿನಿ ವಾಹನಗಳು ರೈತರ ಜಾನುವಾರುಗಳಿದ್ದಲ್ಲಿಗೆ ತೆರಳಿ ಕೂಡಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದ ಸಚಿವ ಪ್ರಭು ಚವ್ಹಾಣ್ ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಜಾರಿಯಲ್ಲಿದೆ ವಿವರಣೆ ನೀಡಿದರು.

ಬೆಂಗಳೂರು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗದ ಅಥಣಿಯಲ್ಲಿ ಮತ್ತು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹೊಸ ಪಶು ವೈದ್ಯಕೀಯ ಕಾಲೇಜು ಈಗಾಲೇ ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ  ಹಾಗೂ ಕರಾವಳಿ ಭಾಗದಲ್ಲಿ ಹೊಸದಾಗಿ ಪಶುವೈದ್ಯಕೀಯ ಕಾಲೇಜು/ವೆಟರ್ನರಿ ಕಾಲೇಜು ಪ್ರಸ್ಥಾವನೆ ಕುರಿತ ಪ್ರಶ್ನೆಗೆ ಕಟ್ಟಡ ಕಾಮಗಾರಿ, ಮೂಲಭೂತ ಸೌಕರ್ಯ ಹಾಗೂ ಹುದ್ದೆಗಳ ಮಂಜೂರಾತಿ ಆದ ನಂತರ‌ ನವದೆಹಲಿಯಲ್ಲಿರುವ  ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಪರಿವೀಕ್ಷಣ ತಂಡ ಭೇಟಿ ನೀಡಿ ಅನುಮತಿ ನೀಡಿದ ನಂತರ ಕಾಲೇಜು ಪ್ರಾರಂಭ ಮಾಡಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News