ಬೆಂಗಳೂರು: ಲಂಚಕ್ಕೆ ಬೇಡಿಕೆ ಆರೋಪ; ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಿದ ಸಿಬಿಐ
ಬೆಂಗಳೂರು, ಮಾ.9: ಪ್ರಕರಣವೊಂದನ್ನು ಮುಚ್ಚಿಹಾಕಲು ಖಾಸಗಿ ಆಸ್ಪತ್ರೆಯೊಂದರ ವ್ಯವಸ್ಥಾಪಕರಿಗೆ 1.50 ಲಕ್ಷ ರೂ.ಲಂಚ ಕೇಳಿದ ಬೈಯ್ಯಪ್ಪನಹಳ್ಳಿ ರೈಲ್ವೆ ಪಡೆ(ಆರ್‍ಪಿಎಫ್) ಇನ್‍ಸ್ಪೆಕ್ಟರ್ ಹಾಗೂ ಪೇದೆಯ ವಿರುದ್ಧ ಕೇಂದ್ರೀಯ ತನಿಖಾ ದಳದ(ಸಿಬಿಐ) ಅಧಿಕಾರಿಗಳು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆತ್ರೇಯಾ ಆಸ್ಪತ್ರೆಯ ನಿರ್ವಹಣಾ ವಿಭಾಗದ ವ್ಯವಸ್ಥಾಪಕ ಮಂಜುನಾಥ್ ನೀಡಿದ ದೂರಿನ ಮೇರೆಗೆ ಇನ್‍ಸ್ಪೆಕ್ಟರ್ ಉಮೇಶ್ ಡಾಕರ್ ಹಾಗೂ ಕಾನ್‍ಸ್ಟೇಬಲ್ ರಾಘವೇಂದ್ರ ವಿರುದ್ಧ ಸಿಬಿಐನ ಎಸಿಬಿ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಬೈಯ್ಯಪ್ಪನಹಳ್ಳಿ ರೈಲ್ವೆ ಜಾಗದ ಬಳಿ ಆಸ್ಪತ್ರೆಯು ನವೀಕರಣ ಕಾಮಗಾರಿ ಮುಗಿಸಿತ್ತು. ಆದರೆ, ಫೆ. 26 ರಂದು ನವೀಕರಣಕ್ಕಾಗಿ ರೈಲ್ವೆ ಜಾಗ ಬಳಸಿಕೊಂಡಿತ್ತು. ಶಾಮಿಯಾನ ಸೇರಿದಂತೆ ಇತರ ಕಾರ್ಯಗಳಿಗೆ ನೆಲ ಅಗೆಯುವಾಗ ರೈಲ್ವೆ ಕೇಬಲ್ ಹಾನಿಯಾಗಿತ್ತು. ಈ ಸಂಬಂಧ ಆರ್‍ಪಿಎಫ್ ಇನ್‍ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಸ್ಪತ್ರೆ ವಿರುದ್ಧ ಅಸಮಾಧಾನ ತೋರ್ಪಡಿಸಿದ್ದರು.
ಜತೆಗೆ ಇಲಾಖೆ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ ರೈಲ್ವೆ ಕೇಬಲ್‍ಗಳಿಗೆ ಹಾನಿ ಮಾಡಲಾಗಿದ್ದು ಪ್ರಕರಣ ದಾಖಲಾಗುವ ಎಚ್ಚರಿಕೆ ನೀಡಿದ್ದರು. ಆಗಿರುವ ಹಾನಿ ಬಗ್ಗೆ ಮರೆಮಾಚಲು 25 ಸಾವಿರ ದಂಡ ಹಾಗೂ ಹೆಚ್ಚುವರಿಯಾಗಿ 1.50 ಲಕ್ಷ ನೀಡುವಂತೆ ಲಂಚ ಕೇಳಿದ್ದರು. ಇದಕ್ಕೆ ಪೇದೆ ರಾಘವೇಂದ್ರ ಜೊತೆಯಾಗಿದ್ದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧ ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.