ಉತ್ತರಪ್ರದೇಶ ಮಾಜಿ ಸಿಎಂ ಮಾಯಾವತಿ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2022-03-09 16:01 GMT

ಬೆಂಗಳೂರು, ಮಾ.9: 2013ರ ವಿಧಾನಸಭಾ ಚುನಾವಣೆ ಹಿನ್ನೆಲೆ ಕಲಬುರಗಿಯಲ್ಲಿ ಪ್ರಚಾರದ ನಡೆಸುತ್ತಿದ್ದ ವೇಳೆ ನಗದು ಪತ್ತೆಯಾಗಿದ್ದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜ ಪಕ್ಷದ(ಬಿಎಸ್‍ಪಿ) ಅಧ್ಯಕ್ಷೆ ಮಾಯಾವತಿ ಹಾಗೂ ಅಂದಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಸತೀಶ್‍ಚಂದ್ರ ಮಿಶ್ರಾ  ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಪ್ರಕರಣ ರದ್ದು ಕೋರಿ ಮಾಯಾವತಿ, ಸತೀಶ್‍ಚಂದ್ರ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯಪೀಠ, ನಗದು ಪತ್ತೆ ವಿಚಾರ ಸಂಬಂಧ ಅರ್ಜಿದಾರರು ನೀಡಿದ ವಿವರಣೆಯನ್ನು ಕೇಂದ್ರ ಚುನಾವಣಾ ಆಯೋಗ ಒಪ್ಪಿದೆ. ಹೀಗಾಗಿ, ನ್ಯಾಯದ ದೃಷ್ಟಿಯಿಂದ ಪ್ರಕರಣ ಮುಂದುವರಿಸುವುದು ಸರಿಯಲ್ಲ. ಈ ಸಂಬಂಧ ಬೆಂಗಳೂರಿನ 42ನೆ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಮತ್ತು ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಆದೇಶ ನೀಡಿದೆ. ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ವಾದ ಮಂಡಿಸಿದ್ದರು.

2013ರ ಎ.30ರಂದು ಮಾಯಾವತಿ ಕಲಬುರಗಿಯ ಜೇವರ್ಗಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಆಗ ಚುನಾವಣಾ ವೀಕ್ಷಕರ ತಂಡ ಪರಿಶೀಲನೆ ನಡೆಸಿದಾಗ 1,50,000 ರೂ. ನಗದು ಪತ್ತೆಯಾಗಿತ್ತು. ಆಗ ಮಾಯಾವತಿ ತಮ್ಮ ಹಣ 50 ಸಾವಿರ  ರೂ. ಉಳಿದ 1 ಲಕ್ಷ ರೂ. ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು. ಅದನ್ನು ಆಯೋಗ ಒಪ್ಪಿತ್ತು. ಆದರೂ ಅವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಮುಂದುವರಿಸಲಾಗಿತ್ತು. ಜತೆಗೆ, ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಅದನ್ನು ಪ್ರಶ್ನಿಸಿ ಮಾಯಾವತಿ, ಸತೀಶ್‍ಚಂದ್ರ ಮಿಶ್ರಾ ನ್ಯಾಯಾಲಯದ ಮೊರೆ ಹೋಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News