ನ್ಯಾಯಾಲಯ ಸಿಬ್ಬಂದಿ ಮೇಲೆ ಹಲ್ಲೆ: ಹೈಕೋರ್ಟ್ ಭದ್ರತಾ ವಿಭಾಗದ ಎಸ್‍ಐ ಅಮಾನತು

Update: 2022-03-09 16:53 GMT

ಬೆಂಗಳೂರು, ಮಾ.9: ಹೈಕೋರ್ಟ್ ಸಿಬ್ಬಂದಿ ಮೇಲೆ ನ್ಯಾಯಾಲಯದಲ್ಲಿಯೇ ಇರುವ ಪೊಲೀಸ್ ಭದ್ರತಾ ಕಚೇರಿಯಲ್ಲಿ ಹಲ್ಲೆ ನಡೆಸಿದ ಆರೋಪದಡಿ, ಹೈಕೋರ್ಟ್ ಭದ್ರತೆಗೆ ನಿಯೋಜಿಸಲಾಗಿದ್ದ ಸಬ್ ಇನ್ಸ್‍ಪೆಕ್ಟರ್ ಟಿಪ್ಪು ಸುಲ್ತಾನ್ ನಾಯಕವಾಡಿ ಅವರನ್ನು ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಅಮಾನತು ಮಾಡಿ ಆದೇಶಿಸಿದ್ದಾರೆ.

ಮಾರ್ಚ್ 8ರಂದು ಪ್ರಕರಣಕ್ಕೆ ಸಂಬಂಧಿಸಿದ ಕಡತವೊಂದು ಸಿಗಲಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯದ ಅಧಿಕಾರಿಯೊಬ್ಬರ ಸೂಚನೆಯಂತೆ ಹೈಕೋರ್ಟ್‍ನ ರಿಟ್ ಮತ್ತು ಪ್ರಾಸಿಕ್ಯೂಷನ್ ವಿಭಾಗದ 8 ಸಿಬ್ಬಂದಿಯನ್ನು ಪೊಲೀಸ್ ಭದ್ರತಾ ಕಚೇರಿಗೆ ಕರೆತಂದು ಹಲ್ಲೆ ನಡೆಸಿದ ಆರೋಪದಡಿ ಈ ಕ್ರಮ ಜರುಗಿಸಲಾಗಿದೆ.

ತಮ್ಮ ವ್ಯಾಪ್ತಿಗೆ ಬರದ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ ಹಾಗೂ ಕರ್ತವ್ಯಲೋಪ ಎಸಗಿದ ಆರೋಪದಡಿ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ, ಸಬ್ ಇನ್ಸಪೆಕ್ಟರ್ ಟಿಪ್ಪು ಸುಲ್ತಾನ್ ಅವರನ್ನು ಅಮಾನತು ಮಾಡಿದ್ದಾರೆ. ಇದೇ ವೇಳೆ ನ್ಯಾಯಾಲಯದ ಸಿಬ್ಬಂದಿ ಮೇಲೆ ನಡೆಸಲು ಸಹಕರಿಸಿದ ಆರೋಪದಡಿ ಪೆÇಲೀಸ್ ಕಾನ್‍ಸ್ಟೆಬಲ್‍ಗಳಾದ ಎಂ.ಡಿ. ವೆಂಕಟೇಶ್, ಸಿದ್ದಣ್ಣ ಕಳಕೂರು ಹಾಗೂ ಶಶಿಕುಮಾರ್ ಎಂಬುವರನ್ನು ಹೈಕೋರ್ಟ್ ವಿಭಾಗದಿಂದ ವರ್ಗಾಯಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಮಾರ್ಚ್ 8ರಂದು ರಾಜ್ಯ ಅಭಿಯೋಜನೆ ವಿಭಾಗದಲ್ಲಿನ ಕ್ರಿಮಿನಲ್ ಪ್ರಕರಣವೊಂದು ವಿಚಾರಣೆಗೆ ನಿಗದಿಯಾಗಿತ್ತು. ಈ ಫೈಲ್ ಕೊಡುವಂತೆ ಎಸ್‍ಪಿಪಿ–2 ವಿ.ಎಸ್ ಹೆಗಡೆ ಪ್ರಾಸಿಕ್ಯೂಷನ್ ಕಚೇರಿಯ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, ಸಿಬ್ಬಂದಿ ಫೈಲ್ ಇಲ್ಲ ಎಂದಿದ್ದರು.

ಪ್ರಕರಣದ ವಿಚಾರಣೆ ಮುಗಿದ ಬಳಿಕ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಕಚೇರಿಯ ಎಲ್ಲ ಕಡೆ ಹುಡುಕಿಸಿದಾಗ, ಬೀರುವೊಂದರ ಹಿಂದಿನ ರಿಟ್ ಪಿಟಿಷನ್‍ಗಳ ಕಡತದಲ್ಲಿ ಬೇಕಾಗಿದ್ದ ಫೈಲ್ ಸಿಕ್ಕಿತ್ತು. ಫೈಲ್ ಅಲ್ಲಿ ಸೇರಿದ್ದೇಗೆ ಎಂದು ವಿಚಾರಿಸಿದಾಗಲೂ ಸಿಬ್ಬಂದಿ ತಮಗೆ ಗೊತ್ತಿಲ್ಲ ಎಂದಿದ್ದರು. ಈ ವೇಳೆ ಎಸ್‍ಪಿಪಿ–2 ಹಾಗೂ ಪ್ರಾಸಿಕ್ಯೂಷನ್ ವಿಭಾಗದ ಶಾಖಾಧಿಕಾರಿ ಹೈಕೋರ್ಟ್ ಭದ್ರತಾ ಪೆÇಲೀಸರನ್ನು ಕರೆಯಿಸಿ ಫೈಲ್ ಕಾಣೆಯಾಗಿದ್ದರ ಕುರಿತು ಸಿಬ್ಬಂದಿಯನ್ನು ‘ವಿಚಾರಿಸಿ‘ ಎಂದು ಮೌಖಿಕವಾಗಿ ತಿಳಿಸಿದ್ದರು.

ಅದರಂತೆ, ಸಬ್ ಇನ್ಸಪೆಕ್ಟರ್ ಟಿಪ್ಪು ಸುಲ್ತಾನ್ ರಿಟ್ ಮತ್ತು ಪ್ರಾಸಿಕ್ಯೂಷನ್ ವಿಭಾಗದ 8 ಸಿಬ್ಬಂದಿಯನ್ನು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್–1ರ ಕೆಳಗೇ ಇರುವ ಕಚೇರಿಗೆ ಕರೆದೊಯ್ದಿದ್ದರು. ಎಂಟರಲ್ಲಿ ಮೂವರು ರಾಜ್ಯ ಸರಕಾರಿ ನೌಕರರು ಎಂಬ ಕಾರಣಕ್ಕೆ ಅವರನ್ನು ವಾಪಸ್ ಕಳುಹಿಸಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ಉಳಿದ ಐವರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News