ಮನೆ ಬಾಗಿಲಿಗೆ ಪಹಣಿ (RTC): ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು, ಮಾ.9: ರಾಜ್ಯಾದ್ಯಂತ ಪಹಣಿ(RTC), ಜಾತಿ, ಆದಾಯ ಪ್ರಮಾಣ ಪತ್ರ ಮತ್ತು ಅಟ್ಲಾಸ್ ಅನ್ನು 45 ಲಕ್ಷ ರೈತರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾ.12 ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದು, ಸಚಿವರು, ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಗಳು ಸೇರಿದಂತೆ, ಹಿರಿಕಿರಿಯ ಅಧಿಕಾರಿಗಳು ಒಂದೇ ದಿನ 45 ಲಕ್ಷ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ ಗುರಿ ಹೊಂದಿದ್ದಾರೆ ಎಂದರು.
ಎಲ್ಲ ದಾಖಲೆಗಳನ್ನು 5 ವರ್ಷಕ್ಕೊಮ್ಮೆ ಉಚಿತವಾಗಿ ನೀಡುವ ಯೋಜನೆ ಕಾನೂನಿನಲ್ಲಿದೆ. ಇದನ್ನು ಇದುವರೆಗೂ ಯಾರೂ ಬಳಸಿಕೊಂಡಿರಲಿಲ್ಲ. ಇದೀಗ ನಮ್ಮ ಸರಕಾರ ಉಚಿತವಾಗಿ ರೈತರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ 800 ಸರ್ವೇಯರ್‍ಗಳನ್ನು ನೇಮಕ ಮಾಡಿದ್ದು, ಇದರ ಜೊತೆಗೆ ಇನ್ನೂ 800 ನೋಂದಾಯಿತ ಸರ್ವೇಯರ್‍ಗಳನ್ನು ನೇಮಕ ಮಾಡಿಕೊಂಡು ಬಾಕಿ ಇರುವ ಎಲ್ಲಾ ಸರ್ವೆ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.