ನೀವು ಬಜೆಟ್ ಮೇಲೆ ಮಾತನಾಡುತ್ತಿದ್ದೀರೋ ಹೇಗೆ?: ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ಜಟಾಪಟಿ
ಬೆಂಗಳೂರು, ಮಾ. 9: ‘ನೀವು ಬಜೆಟ್ ಮೇಲೆ ಮಾತನಾಡುತ್ತಿದ್ದೀರೋ ಅಥವಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಮಾತನಾಡುತ್ತಿದ್ದೀರೋ ಮೊದಲು ಸ್ಪಷ್ಟಪಡಿಸಿ. ನೀವು ಹೀಗೆ ಮಾತನಾಡಿದರೆ ನಿಮ್ಮನ್ನು ‘ಬಿ' ಟೀಮ್ ಎನ್ನದೆ ಇನ್ನೇನು ಹೇಳಬೇಕು' ಎಂಬ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯೆ, ಕೆಲಕಾಲ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರ ನಡುವಿನ ಏರಿದ ಧ್ವನಿಯಲ್ಲಿ ಆರೋಪ-ಪ್ರತ್ಯಾರೋಪ, ವಾಗ್ವಾದಕ್ಕೂ ಕಾರಣವಾಯಿತು.
ಬುಧವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯ ಅಂದಾಜು ಮೇಲಿನ ಚರ್ಚೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದ ವೇಳೆ, ನಮ್ಮ ಪಕ್ಷದ ವಿರುದ್ಧ ರಾಷ್ಟ್ರೀಯ ಪಕ್ಷವೊಂದರ ಬಿ ಟೀಮ್ ಎಂಬ ಆರೋಪ ಕೇಳಬೇಕಿದೆ. ಆದರೆ, ವಿಪಕ್ಷ ನಾಯಕರು ಆರ್ಥಿಕ ಶಿಸ್ತು ದಾರಿ ತಪ್ಪಿರುವ ಬಗ್ಗೆ ಹಾಗೂ ಸಾಲದ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಎರಡು ದಿನಗಳ ಕಾಲ ಮಾತನಾಡಿದ್ದಾರೆ. ಆದರೆ, 2014-15ರಿಂದ ಇಲ್ಲಿಯವರೆಗೆ ಸಾಲದ ಪ್ರಮಾಣದ ಏರಿಕೆಯಾಗುತ್ತಿದೆ. ಆರೆಸೆಸ್ಸ್ ಬಜೆಟ್ ಎಂದೂ ಟೀಕಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಮಧ್ಯೆಪ್ರವೇಶಿಸಿದ ಯು.ಟಿ.ಖಾದರ್, ‘ಕುಮಾರಸ್ವಾಮಿಯವರೇ ನೀವು ಬಸವರಾಜ ಬೊಮ್ಮಾಯಿ ಬಜೆಟ್ ಮೇಲೆ ಮಾತನಾಡುತ್ತಿದ್ದೀರೋ ಅಥವಾ ಸಿದ್ದರಾಮಯ್ಯರ ಹೇಳಿಕೆ ವಿರುದ್ಧವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಆಗ್ರಹಿಸಿದರು. ‘ಏನ್ರೀ ನಿಮ್ಮ ನಾಯಕರು ಮಾತನಾಡುವ ವೇಳೆ ನಾವೆಲ್ಲರೂ ಕೂತು ಕೇಳಿದ್ದೇವೆ. ನೀವು ಕೂತು ಕೇಳುವುದನ್ನು ಬಿಟ್ಟು ಟೀಕೆ ಮಾಡುತ್ತೀದ್ದೀರಿ' ಎಂದು ಜೆಡಿಎಸ್ ಸದಸ್ಯರು, ಖಾದರ್ ವಿರುದ್ಧ ಮುಗಿಬಿದ್ದರು.
ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಸದಸ್ಯರು ಆ ಸಂದರ್ಭದಲ್ಲಿ ಮಾತನಾಡಲು ಮುಂದಾದಾಗ ಮತ್ತಷ್ಟು ಗದ್ದಲು ಹೆಚ್ಚಲು ಕಾರಣವಾಯಿತು. ಈ ಹಂತದಲ್ಲಿ ಎದ್ದುನಿಂತ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ‘ವಿಪಕ್ಷ ನಾಯಕರು ಮಾತನಾಡುವಾಗ ಸಿಎಂ ಮಂಡಿಸಿದ ಬಜೆಟ್‍ಗಿಂತ ತಾವು ಮಂಡಿಸಿದ್ದ ಬಜೆಟ್ ಬಗ್ಗೆ ಮಾತನಾಡುತ್ತಿದ್ದಾರೆಂಬ ಅನುಮಾನವಿತ್ತು. ನಾನು ಈ ರೀತಿ ಎಂದಿದ್ದೆ. ಎರಡೂ ಬಜೆಟ್‍ಗಳ ಹೋಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದಾರೆ. ವಿಪಕ್ಷÀ ನಾಯಕರ ಭಾಷಣಕ್ಕೆ ಉತ್ತರ ಹೇಳಲು ಸಿಎಂಗೆ ಎರಡು ದಿನ ಬೇಕಾಗುತ್ತದೆ' ಎಂದು ಹೇಳಿದರು.
‘ನಿಮ್ಮನ್ನು ಅವರು ಸಮರ್ಥನೆ ಮಾಡುತ್ತಾರೆ. ಅವರನ್ನು ನೀವು ಸಮರ್ಥಿಸಿಕೊಳ್ಳುತ್ತೀರಿ. ಈ ರೀತಿಯಾದರೆ ‘ಬಿ' ಟೀಮ್ ಎಂದು ಹೇಳುವುದಲ್ಲದೇ ಬೇರೇನೂ ಹೇಳಬೇಕು ಎಂದು ಯು.ಟಿ.ಖಾದರ್ ಪ್ರಶ್ನಿಸಿದರು. ಆಗ ಕೆರಳಿದ ಜೆಡಿಎಸ್ ಸದಸ್ಯರು ಏರಿದ ಧ್ವನಿಯಲ್ಲಿ, ನಮ್ಮ ನಾಯಕರಿಗೆ ಮಾತನಾಡಲು ಅವಕಾಶ ನೀಡದೆ ಹೀಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದರಿಂದ ಉಭಯ ಪಕ್ಷಗಳ ಸದಸ್ಯರ ನಡುವೆ ಗದ್ದಲ ಸೃಷ್ಟಿಯಾಯಿತು.
ಈ ವೇಳೆ ಎದ್ದುನಿಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಆಯವ್ಯಯ ಪ್ರಮುಖ ದಾಖಲೆ. ಬಜೆಟ್ ಬಗ್ಗೆ ಸಮಗ್ರವಾಗಿ ಚರ್ಚೆ ಆಗಬೇಕು. ಎಲ್ಲರಿಗೂ ಚರ್ಚಿಸುವ ಹಕ್ಕಿದೆ. ಅಧಿವೇಶನದಲ್ಲಿ ಯಾವುದೇ ವಿಚಾರಗಳ ಚರ್ಚೆಗೆ ನಿರ್ಬಂಧವಿಲ್ಲ. ಹೀಗಾಗಿಯೇ ಒಂದು ತಿಂಗಳ ಕಲಾಪ ನಡೆಸುತ್ತಿದ್ದು, ಎಲ್ಲ ವಿಚಾರಗಳನ್ನು ಚರ್ಚೆ ಮಾಡಬೇಕು' ಎಂದು ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 13 ಬಜೆಟ್ ಮಂಡಿಸಿದ ಅನುಭವಿಗಳು. ಎರಡೂ ದಿನ ಮಾತನಾಡಿದ್ದಾರೆ. ಇತರೆ ಸದಸ್ಯರು ಮಾತನಾಡಿದರೂ ಸರಕಾರ ಉತ್ತರ ಕೊಡುತ್ತದೆ. ಕುಮಾರಸ್ವಾಮಿ ಸಿಎಂ ಆಗಿ ಕೆಲಸ ಮಾಡಿದ್ದು, ಬಜೆಟ್ ಮಂಡನೆ ಮಾಡಿದ್ದಾರೆ. ಅವರು ಪ್ರಸ್ತಾಪಿಸಿರುವ ವಿಚಾರದ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದು, ಅವರಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಬಸವರಾಜ ಬೊಮ್ಮಾಯಿ ಆಕ್ಷೇಪಿಸಿದರು.
‘ಎರಡು ವರ್ಷದಲ್ಲಿ ಉಂಟಾದ ಆರ್ಥಿಕ ಹಿಂಜರಿತ, ಅದರ ನಂತರ ಬಜೆಟ್ ಯಾವ ರೀತಿ ಇರಬೇಕು, ಹಣಕಾಸು ಪರಿಸ್ಥಿತಿಯನ್ನು ಹೇಗೆ ಸುಸ್ಥಿತಿಗೆ ತರಬೇಕು ಎಂಬ ಬಗ್ಗೆ ಚರ್ಚೆಯಾಗಲಿ. ಒಳ್ಳೆಯ ಸಲಹೆಯನ್ನು ಸ್ವೀಕಾರ ಮಾಡುತ್ತೇವೆ. ಬಜೆಟ್‍ನ ಬದಲಾವಣೆಗೆ ಮುಕ್ತವಾಗಿದ್ದೇವೆ. ಎಲ್ಲರೂ ಮಾತನಾಡಿ ಬಜೆಟ್ ಬಗ್ಗೆ ಚರ್ಚಿಸಿದರೆ ಒಳ್ಳೆಯದು ಎಂದು ಅವರು ತಿಳಿಸಿದರು.