ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಶಾಲೆ ಬಿಟ್ಟ ಮಕ್ಕಳೆಷ್ಟು ಗೊತ್ತೇ ?
ಬೆಂಗಳೂರು: ರಾಜ್ಯದಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ 46 ಸಾವಿರ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದು, ಈ ಪೈಕಿ ಫೆಬ್ರುವರಿ ಕೊನೆಯವರೆಗೆ ಕೇವಲ ಶೇಕಡ 35ರಷ್ಟು ಮಕ್ಕಳನ್ನು ಮಾತ್ರ ಮತ್ತೆ ಶಾಲೆಗೆ ಕರೆತರಲು ಸಾಧ್ಯವಾಗಿದೆ ಎಂಬ ಅಂಶವನ್ನು ಕರ್ನಾಟಕ ಸರ್ಕಾರ ಬಹಿರಂಗಪಡಿಸಿದೆ.
ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಎಷ್ಟು ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದಾರೆ ಎಂಬ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಇತ್ತೀಚೆಗೆ ವಿಧಾನ ಪರಿಷತ್‌ನಲ್ಲಿ ನೀಡಿದ ಉತ್ತರದಲ್ಲಿ ಈ ಅಂಶವನ್ನು ದೃಢಪಡಿಸಿದ್ದಾರೆ. ಈ ಸಂಬಂಧ ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಸಮೀಕ್ಷೆ ನಡೆಸಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 14-16 ವಯೋಮಿತಿಯ 31,502 ಮಕ್ಕಳು ಮತ್ತು 6-14 ವಯೋಮಾನದ 15,090 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ಮೊದಲ ಗುಂಪಿನ 4153 ಮಂದಿ ಮತ್ತು ಎರಡನೇ ಗುಂಪಿನ 12,592 ಮಂದಿ ಮರು ಸೇರ್ಪಡೆಗೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮರು ಸೇರ್ಪಡೆಯಾದವರ ಪ್ರಮಾಣ ಕೇವಲ ಶೇಕಡ 5ರಷ್ಟು ಇದ್ದು, 8260 ಮಕ್ಕಳ ಪೈಕಿ 417 ಮಂದಿ ಮರು ಸೇರ್ಪಡೆಗೊಂಡಿದ್ದಾರೆ.
ಅಪೌಷ್ಟಿಕತೆ, ಬಾಲ್ಯವಿವಾಹ ಹಾಗೂ ಕಲಿಕಾ ನಷ್ಟವನ್ನು ತಪ್ಪಿಸಲು ಈ ಮಕ್ಕಳನ್ನು ಪತ್ತೆ ಮಾಡಿ ಮತ್ತೆ ಸೇರಿಸಿಕೊಳ್ಳಲು ಹಲವು ವಿಭಾಗಗಳ ಸಹಕಾರದೊಂದಿಗೆ ಪ್ರಯತ್ನ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಹೇಳಿದ್ದಾರೆ.
ಮಕ್ಕಳು 6-7 ದಿನ ಸತತವಾಗಿ ಗೈರುಹಾಜರಾದರೆ ಡಿಡಿಪಿಐ, ಮುಖ್ಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರು ಇದಕ್ಕೆ ಕಾರಣ ಹುಡುಕಬೇಕು ಎಂದು ಸ್ಪಷ್ಟಪಡಿಸಿದರು.
ಆದರೆ ಸಾಂಕ್ರಾಮಿಕದಿಂದ ಉಂಟಾದ ಪರಿಣಾಮವನ್ನು ಸರ್ಕಾರ ಕೀಳಂದಾಜು ಮಾಡಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಪ್ರತಿಕ್ರಿಯಿಸಿದ್ದಾರೆ.
"ಯಾವುದೇ ಅಂಕಿ ಅಂಶಕ್ಕೆ ಪರಾಮರ್ಶನಾ ಅಂಶ ಇರಬೇಕು. ಸಾಂಕ್ರಾಮಿಕ ರೋಗ ಆರಂಭಕ್ಕೆ ಮುನ್ನ ಅಂದರೆ 2019-20ರಲ್ಲಿ ಎಷ್ಟು ಮಕ್ಕಳು ನೋಂದಾಯಿಸಿಕೊಂಡಿದ್ದಾರೆ ಹಾಗೂ ಸಾಂಕ್ರಾಮಿಕದ ಬಳಿಕ ಇದು ಹೇಗೆ ಬದಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. 2019ರ ಡಿಸೆಂಬರ್‌ನಲ್ಲೂ ಶಾಲೆಗಳಿಂದ ಹೊರಗುಳಿದ ಮಕ್ಕಳ ಸಂಖ್ಯೆ ಇಷ್ಟೇ ಇದೆ. ಅಂದರೆ 2020-21ರಲ್ಲಿ ಶಾಲೆ ಬಿಟ್ಟ ದೊಡ್ಡ ಸಂಖ್ಯೆಯನ್ನು ಪರಿಗಣಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. 2020ರ ಮಾರ್ಚ್‌ನಿಂದ 2022ರ ಮಾರ್ಚ್ ನಡುವೆ ಎಷ್ಟು ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎನ್ನುವುದು ಮುಖ್ಯ'' ಎಂದು ಅವರು ಪ್ರತಿಪಾದಿಸಿದ್ದಾರೆ.