ಪಂಚ ರಾಜ್ಯಗಳ ಫಲಿತಾಂಶ ಕರ್ನಾಟಕ ಚುನಾವಣೆ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಲಿದೆ: ಸಿಎಂ ಬೊಮ್ಮಾಯಿ

Update: 2022-03-10 13:08 GMT

ಬೆಂಗಳೂರು, ಮಾ. 10: ‘ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕ ರಾಜ್ಯದ ಚುನಾವಣೆಯ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಇನ್ನಷ್ಟು ಶಕ್ತಿಶಾಲಿಯಾಗಲಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ನಮ್ಮ ಸರಕಾರ ಈಗಾಗಲೇ ಬಜೆಟ್‍ನಲ್ಲಿ ಘೋಷಣೆ ಮಾಡಿರುವಂತೆ ಉತ್ತಮ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ನವ ಕರ್ನಾಟಕ ನಿರ್ಮಾಣದ ಮೂಲಕ ಜನತೆ ವಿಶ್ವಾಸ ಗಳಿಸಲಿದೆ' ಎಂದು ತಿಳಿಸಿದರು.

‘2023ರಲ್ಲಿ ನಡೆಯಲಿವ ವಿಧಾನಸಭೆ ಫಲಿತಾಂಶವೂ ಇಂದಿನ ಪಂಚರಾಜ್ಯಗಳ ಫಲಿತಾಂಶದಂತೆಯೇ ಆಗಲಿದೆ. ಇಂದಿನ ಫಲಿತಾಂಶ ನಮ್ಮ ಶಾಸಕರಿಗೆ ಸಕಾರಾತ್ಮಕ ಉತ್ತೇಜನ ನೀಡಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಸರಕಾರ ರಚನೆ ಮಾಡಲು ಜನರ ಆಶೀರ್ವಾದ ಪಡೆದುಕೊಂಡಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡ ಬಿಜೆಪಿ ಮತ್ತೊಮ್ಮೆ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಡಬಲ್ ಎಂಜಿನ್ ಸರಕಾರ ಉತ್ತರ ಪ್ರದೇಶವನ್ನು ಮುನ್ನಡೆಸುವ ಕೆಲಸ ಮಾಡುತ್ತಿದೆ. ಐದು ರಾಜ್ಯಗಳ ಮತದಾರರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಮ್ಮ ನಾಯಕರಾದ ಮೋದಿ, ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ

‘ಅಧಿಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಅಷ್ಟೇ. ಇದರಿಂದ ಜಂಬ ಪಡುವ ಅಗತ್ಯವಿಲ್ಲ. ಪಂಜಾಬ್ ರಾಜ್ಯದÀಲ್ಲಿ ಮಾತ್ರ ನಾವು ಅಧಿಕಾರದಲ್ಲಿದ್ದೆವು. ಬೇರೆ ರಾಜ್ಯಗಳಲ್ಲಿ ನಾವು ಅಧಿಕಾರದಲ್ಲಿರಲಿಲ್ಲ. ಉತ್ತರಾಖಂಡ, ಗೋವಾದಲ್ಲಿ ಗೆಲುವಿನ ನಿರೀಕ್ಷೆ ಇತ್ತು. ನಮ್ಮ ತಪ್ಪಿನಿಂದ ಪಂಜಾಬ್‍ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಚುನಾವಣೆಗಳಿಂದ ನಾನೇನು ಬಹಳ ಏನು ನಿರೀಕ್ಷೆ ಇಟ್ಟಿರಲಿಲ್ಲ. ಆದರೆ, ಗೋವಾ, ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಅಂದಾಜು ಇತ್ತು. ಈ ಚುನಾವಣೆಯಿಂದ ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

2023ರಲ್ಲಿ ಅಧಿಕಾರಕ್ಕೆ ತರುತ್ತೇವೆ

‘ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಮೋದಿ ನೇತೃತ್ವದಸರಕಾರವನ್ನು ಜನ ನಂಬಿರುವುದಕ್ಕೆ ಇದು ಸಾಕ್ಷಿ. ನಿರೀಕ್ಷೆ ಮಾಡಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಉತ್ತರ ಪ್ರದೇಶದಲ್ಲಿ ಗೂಂಡಾಗಿರಿ ತಡೆದಿದ್ದಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‍ಗೆ ದೇಶದಲ್ಲೇ ನೆಲೆ ಇಲ್ಲದಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೋವಾದಲ್ಲಿ ಸರಕಾರ ರಚನೆ ಮಾಡುತ್ತೇವೆಂಬ ಭ್ರಮೆಯಲ್ಲಿ ಹೋಗಿದ್ದರು. ಆ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ'

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News