ಪೊಲೀಸರು ಬಾಡಿವಾರ್ನ್ ಕ್ಯಾಮೆರಾ ಅಳವಡಿಸದಿದ್ದರೆ ಕ್ರಮ: ಸಚಿವ ಆರಗ ಜ್ಞಾನೇಂದ್ರ

Update: 2022-03-10 13:30 GMT

ಬೆಂಗಳೂರು, ಮಾ.10: ಪೊಲೀಸರಿಗೆ ನೀಡಲಾಗಿರುವ ಬಾಡಿ ವಾರ್ನ್ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳದಿದ್ದರೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ನಡೆಯುವ ಮಾತುಕತೆ, ವಾದ-ವಿವಾದಗಳನ್ನು ದಾಖಲಿಸಿಕೊಳ್ಳಲು ಬಾಡಿ ವಾರ್ನ್ ಕ್ಯಾಮೆರಾಗಳನ್ನು ಪೊಲೀಸರಿಗೆ ನೀಡಲಾಗುತ್ತದೆ. ಅದನ್ನು ಅಳವಡಿಸಿಕೊಳ್ಳದಿದ್ದರೆ ಪೆÇಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಾಡಿ ವಾರ್ನ್ ಕ್ಯಾಮೆರಾಗಳನ್ನು ಧರಿಸುವುದರಿಂದ ಅನಗತ್ಯ ಸಂಭಾಷಣೆ ಕಡಿಮೆ ಮಾಡುವ ಜತೆಗೆ ಸುಗಮ ರಸ್ತೆ ಸಂಚಾರ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಿದೆ ಎಂದು ಅವರು ತಿಳಿಸಿದರು.

ಟೋಯಿಂಗ್ ವಾಹನಗಳ ಬಗ್ಗೆ ಇದ್ದ ಗೊಂದಲದ ಹಿನ್ನೆಲೆಯಲ್ಲಿ ಸದ್ಯಕ್ಕೆ ಅದನ್ನು ನಿಲ್ಲಿಸಲಾಗಿದೆ. ಅತ್ಯಾಧುನಿಕ ಜನಸ್ನೇಹಿ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ ಎಂದು ಹೇಳಿದರು.

ಪ್ರಮುಖ ರಸ್ತೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಈ ಕ್ಯಾಮೆರಾಗಳು ಕಳ್ಳತನವಾಗಿರುವ ವಾಹನಗಳ ಕುರಿತಂತೆಯೂ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಗುಪ್ತಚರ ಇಲಾಖೆಗೆ ಪ್ರತ್ಯೇಕ ನೇಮಕಾತಿ, ಅವರಿಗೆ ಕಾಲ ಕಾಲಕ್ಕೆ ತರಬೇತಿ, ವಿಶೇಷ ಭತ್ತೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಗುಪ್ತಚರ ಇಲಾಖೆಯನ್ನು ಬಲಪಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News