ಖಾಸಗಿ ಶಾಲೆಗಳ ಮಾನ್ಯತೆಗೆ ಪ್ರತಿ ವರ್ಷ ಅರ್ಜಿ ನೀಡಬೇಕಿಲ್ಲ: ಹೈಕೋರ್ಟ್
ಬೆಂಗಳೂರು, ಮಾ.10: ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತಾ ಅವಧಿ 10 ವರ್ಷವಾಗಿರುವುದರಿಂದ ಅದರ ನವೀಕರಣಕ್ಕಾಗಿ ಪ್ರತಿ ವರ್ಷ ಸರಕಾರಕ್ಕೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ-1983ರ ನಿಯಮ 36ರ ಪ್ರಕಾರ ಮಾನ್ಯತೆ ಅವಧಿ ಮುಗಿದ ನಂತರವೇ ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸಬೇಕಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ನಿಯಮಗಳು-1999 ರ ನಿಯಮ 4(3) ಅಡಿ ಪಡೆದ ಮಾನ್ಯತೆಯು 10 ವರ್ಷಗಳ ಕಾಲ ಇರಲಿದೆ. ಈ ಅಂಶವನ್ನು ಸರಕಾರದ ಆಕ್ಷೇಪಣೆಯಲ್ಲೂ ಸ್ಪಷ್ಟಪಡಿಸಲಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಮಾನ್ಯತೆ ಅವಧಿ ಕುರಿತಂತೆ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಸರಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.