ಕಲಬುರಗಿ ಕೋಟೆ ಒತ್ತುವರಿ ವಿಚಾರ: ಅಕ್ರಮ ವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿ; ಹೈಕೋರ್ಟ್
ಬೆಂಗಳೂರು, ಮಾ.10: ಘೋಷಿತ ಮತ್ತು ಸಂರಕ್ಷಿತ ಸ್ಮಾರಕವಾಗಿರುವ ಐತಿಹಾಸಿಕ ಕಲಬುರಗಿ ಕೋಟೆಯ ಒಳಗೆ ಮತ್ತು ಹೊರಗೆ ನೆಲೆಸಿರುವ ಒತ್ತುವರಿದಾರರು ಹಾಗೂ ಅಕ್ರಮ ವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅವಕಾಶ ಇರುವ ಕುರಿತಂತೆ 2 ವಾರಗಳಲ್ಲಿ ಮಾಹಿತಿ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಲಬುರಗಿಯವರೇ ಆದ ಸಾಮಾಜಿಕ ಕಾರ್ಯಕರ್ತ, ಅಫಜಲಪುರ ಮಾಜಿ ಶಾಸಕ ಹಣಮಂತರಾವ ದೇಸಾಯಿ ಅವರ ಪುತ್ರ, ಶರಣ್ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿದೆ.
ಸರಕಾರದ ಯಾವುದಾದರೂ ಯೋಜನೆಯಡಿ ಕಲಬುರಗಿ ಕೋಟೆಯ ಒಳಗೆ ಮತ್ತು ಹೊರಗೆ ನೆಲೆಸಿರುವ 194 ಒತ್ತುವರಿದಾರರು ಹಾಗೂ ಅಕ್ರಮ ವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅವಕಾಶ ಇದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ಸರಕಾರಕ್ಕೆ ನ್ಯಾಯಪೀಠವು ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಕಲಬುರಗಿ ಕೋಟೆಯ ಒಳಗೆ ಮತ್ತು ಹೊರಗೆ ಸುಮಾರು 194 ಕುಟುಂಬಗಳು ಭೂ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ವಾಸಿಸುತ್ತಿವೆ. ಈ ಬಗ್ಗೆ ಸ್ವತಃ ಅರ್ಜಿದಾರರಾಗಿರುವ ಶರಣ್ ದೇಸಾಯಿ ಅವರು 2011ರಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಪಡೆದುಕೊಂಡಿದ್ದರು.