×
Ad

ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಸೇರಿ ನಾಲ್ವರಿಗೆ ಜಾಮೀನು

Update: 2022-03-11 18:42 IST

ಬೆಂಗಳೂರು, ಮಾ.11: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿದ್ದ ಸಮಯದಲ್ಲಿ ರಾಜಾತಿಥ್ಯ ಪಡೆದ ಆರೋಪ ಕುರಿತಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಸೇರಿ ನಾಲ್ವರಿಗೆ ಎಸಿಬಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಶಶಿಕಲಾ ಹಾಗೂ ಸಂಬಂಧಿ ಇಳವರಸಿ ಅಕ್ರಮ ಆಸ್ತಿ ಪ್ರಕರಣ ಸಂಬಂಧ ನಾಲ್ಕು ವರ್ಷಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಕಳೆದ ವರ್ಷ ಬಿಡುಗಡೆಯಾಗಿದ್ದರು. ಈ ಮಧ್ಯೆ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ರಾಜಾತಿಥ್ಯ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ವಿಚಾರವಾಗಿ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರಿದ್ದ ಏಕಸದಸ್ಯ ಸಮಿತಿ ನೇಮಿಸಿ ವರದಿ ನೀಡಲು ಸರಕಾರ ಸೂಚಿಸಿತ್ತು. ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಣ ನೀಡಿರುವುದರಿಂದ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ ವಿನಯ್ ಕುಮಾರ್ ಸಮಿತಿ ವರದಿ ನೀಡಿತ್ತು.

ಇತ್ತೀಚಿಗೆ ಸರಕಾರದ ಅನುಮತಿ ಪಡೆದ ಎಸಿಬಿಯು ಶಶಿಕಲಾ, ಇಳವರಸಿ ಮತ್ತು ಜೈಲು ಸಿಬ್ಬಂದಿಯಾದ ಗಜರಾಜು, ಸುರೇಶ್ ಹಾಗೂ ಇಬ್ಬರು ಅಧಿಕಾರಿಗಳು ಸೇರಿ ಆರು ಜನರ ವಿರುದ್ದ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಶಿಕಲಾ, ಇಳವರಸಿ ಹಾಗೂ ಜೈಲು ಸಿಬ್ಬಂದಿಯಾದ ಗಜರಾಜು ಹಾಗೂ ಸುರೇಶ್ ಎಸಿಬಿ ಕೋರ್ಟ್‍ಗೆ ಹಾಜರಾಗಿದ್ದರು. ಈ ವೇಳೆ ನಾಲ್ವರು ಆರೋಪಿಗಳಿಗೂ ಐದು ಲಕ್ಷ ಬಾಂಡ್ ಪಡೆದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ಎ.16ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News