ನಂಜನಗೂಡು: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

Update: 2022-03-11 14:30 GMT
ಸಾಂದರ್ಭಿಕ ಚಿತ್ರ

ಮೈಸೂರು,ಮಾ.11: ರಕ್ತಸ್ರಾವದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗಗಳನ್ನು ಕುಟುಂಬ ವರ್ಗದವರು ದಾನ ಮಾಡುವ ಮೂಲಕ ನಾಲ್ಕು ಜೀವಗಳಿಗೆ ಹೊಸ ಜೀವನ ನೀಡಿದ್ದಾರೆ.

ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ನಂಜುಂಡಸ್ವಾಮಿ ಎಂಬುವವರ ಪತ್ನಿ ಸವಿತಾ(40) ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸವಿತಾ ಫೆ. 18ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಅನಾರೋಗ್ಯಕ್ಕೆ ಒಳಗಾದರು. ಎರಡು ದಿನಗಳ ಕಾಲ ವೆಂಟಿಲೇಟರ್‍ನಲ್ಲಿಡಲಾಗಿತ್ತು. ಆದರೆ ಮಾ. 19ರಂದು ಬೆಳಗ್ಗೆ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದರು.ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತಪಡಿಸಲಾಯಿತು. ನಿಗದಿತ ನಿಯಮಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು. ಈ ಸಂದರ್ಭದಲ್ಲಿ ಸವಿತಾ ಅವರ ಪತಿ ಅಂಗಾಂಗ ದಾನ ಮಾಡಲು ಮುಂದೆ ಬಂದರು. ಬಳಿಕ ಅವರ ಕುಟುಂಬದವರ ಒಪ್ಪಿಗೆ ಪಡೆದು ಅಂಗಾಂಗಗಳನ್ನು ಪಡೆಯಲಾಯಿತು.

ನಗರದ ಖಾಸಗಿ ಆಸ್ಪತ್ರೆಯಿಂದ ಬುಧವಾರ ಸಂಜೆ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಲಾಯಿತು. ಮತ್ತೊಂದು ಆ್ಯಂಬುಲೆನ್ಸ್ ನಲ್ಲಿ ಒಂದು ಕಿಡ್ನಿಯನ್ನು ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಒಂದು ಕಿಡ್ನಿ, ಒಂದು ಯಕೃತ್‍ನ್ನು ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿಯೇ ರೋಗಿಗಳಿಗೆ ಕಸಿ ಮಾಡಲಾಗಿದೆ. ಕಾರ್ನಿಯಾಗಳನ್ನು ಮೈಸೂರಿನ ಕಣ್ಣಿನ ಬ್ಯಾಂಕ್‍ಗೆ ರವಾನಿಸಲಾಗಿದ್ದು, ಇಬ್ಬರಿಗೆ ಇದರ ಪ್ರಯೋಜನ ಸಿಗಲಿದೆ ಎಂದು ಆಸ್ಪತ್ರಯ ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News