×
Ad

ಸಾರ್ವಜನಿಕರ ದುಡ್ಡಿಗೆ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ: ಬಿಜೆಪಿ ಶಾಸಕನಿಂದಲೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಟೀಕೆ

Update: 2022-03-11 20:17 IST
ಸಂಸದ ಪ್ರತಾಪ್ ಸಿಂಹ | ಶಾಸಕ ಎಲ್.ನಾಗೇಂದ್ರ

ಮೈಸೂರು,ಮಾ.11: ಸಾರ್ವಜನಿಕರ ದುಡ್ಡಿಗೆ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ, ಅವರ  ಮನೆಯ ದುಡ್ಡು ತಂದು ಕೆಲಸ ಮಾಡಿದ್ದರೆ  ಕ್ರೆಡಿಟ್ ತೆಗೆದುಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಎಲ್.ನಾಗೇಂದ್ರ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸಂಸದರ ಕ್ರೆಡಿಟ್ ವಾರ್ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಿಮ್ಮ ಮನೆಯ ದುಡ್ಡು ತಂದು ಅಭಿವೃದ್ಧಿ ಮಾಡಿದ್ದರೆ ಕ್ರೆಡಿಟ್ ತಗೊಳ್ಳಿ. ಬಿಜೆಪಿಗೆ ಕ್ರೆಡಿಟ್ ಬರಬೇಕು. ಮೋದಿಯವರೇ ಆ ಕ್ರೆಡಿಟ್ ತಗೋಳೋದಿಲ್ಲ. ಅವರು ಬಿಜೆಪಿಗೆ ಕ್ರೆಡಿಟ್ ಕೊಡುತ್ತಾರೆ. ಅವರ ಮನೆಯಿಂದ ದುಡ್ಡು ತಂದು ಹಾಕಿದ್ದರೆ ಅವರೇ ತಗೆದುಕೊಳ್ಳಲಿ. ಸಾರ್ವಜನಿಕರ ದುಡ್ಡಿಗೆ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ. ಸದ್ಯದಲ್ಲಿ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಸ್ಟೋನ್ ಬಿಲ್ಡಿಂಗ್ ಗೆ  ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಲಿದ್ದಾರೆ. ಸದ್ಯ ಅದನ್ನೂ ನಾನು ತಂದೆ ಎನ್ನದಿದ್ದರೆ ಸಾಕು ಎಂದು ಸಂಸದ ಪ್ರತಾಪ ಸಿಂಹ ಅವರಿಗೆ ಶಾಸಕ  ಟಾಂಗ್ ನೀಡಿದರು.

ನಾನು ಸ್ಥಳೀಯ ಶಾಸಕ ನನ್ನ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮ ನಡೆಯಬೇಕು. ನನ್ನ ಅನುಪಸ್ಥಿತಿಯಲ್ಲಿ ಕೆ ಆರ್ ಆಸ್ಪತ್ರೆ ವಿಚಾರ ಮೀಟಿಂಗ್ ಮಾಡಿದರೆ ಅದಕ್ಕೆ ಬೆಲೆ ಇಲ್ಲ. ಅವರು ಮೀಟಿಂಗ್ ಮಾಡಲಿ ಆದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬುದೇ ನನಗೆ ಬೇಜಾರು. ಇನ್ನೂ ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿಲ್ಲ. ಈಗಲೆ ಮೀಟಿಂಗ್ ಮಾಡಿದರೆ ಅರ್ಥ ಏನು..? ಶತಮಾನೋತ್ಸಕ್ಕೆ ಇನ್ನೂ ಎರಡು ವರ್ಷ ಇದೆ. ಈಗಲೇ ಚರ್ಚೆ ಮಾಡಿದರೆ ಪ್ರಯೋಜನ ಇಲ್ಲ . ಪ್ರತಾಪ್ ಸಿಂಹ ಇನ್ನೂ 100,200 ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ತಂದು ಅಭಿವೃದ್ಧಿ ಮಾಡಲಿ ನನಗೂ ಸಂತೋಷ. ಏನಾದರೂ ಸಮಸ್ಯೆ ಆದಾಗ ಸ್ಥಳೀಯ ಶಾಸಕರನ್ನೇ  ಕೇಳೋದು. ಇದನ್ನು  ಅರ್ಥ ಮಾಡಿಕೊಳ್ಳಬೇಕು. ನಾನು ಶಾಸಕನಾಗಿದ್ದೇನೆ. ನಾನು ಅನುದಾನ ತರುತ್ತೇನೆ. ಬೇರೆ ಕಡೆ ಸಮಸ್ಯೆ ಇದೆ. ಜಿ.ಟಿ ಕ್ಷೇತ್ರದಲ್ಲಿ, ಪಿರಿಯಾಪಟ್ಟಣದಲ್ಲಿ ಸಾಕಷ್ಟು ಸಮಸ್ಯೆ ಇದೆ. ಅಲ್ಲಿಗೂ ಅನುದಾನ ತಗೊಂಡು ಬನ್ನಿ. ನನ್ನ ಕ್ಷೇತ್ರಕ್ಕೆ 150 ಕೋಟಿ ಅನುದಾನ ತಂದಿದ್ದೇನೆ. ಸರ್ಕಾರದ ಹಣಕ್ಕೆ ನಾವು ಕ್ರೆಡಿಟ್ ತೆಗೆದುಕೊಳ್ಳೋದಲ್ಲ. ಒಟ್ಟಾರೆ ಬಿಜೆಪಿಗೆ ಆ ಕ್ರೆಡಿಟ್ ಸಲ್ಲಬೇಕು ಎಂದು ಕಿಡಿಕಾರಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News