ಪಾಕಿಸ್ತಾನಕ್ಕೆ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆ: ಭಾರತದ ರಕ್ಷಣಾ ಸಚಿವಾಲಯ ವಿಷಾದ

Update: 2022-03-15 02:50 GMT
ಸಾಂಧರ್ಬಿಕ ಚಿತ್ರ

ಹೊಸದಿಲ್ಲಿ,ಮಾ.11: ಭಾರತದ ಕಡೆಯಿಂದ ಆಕಸ್ಮಿಕವಾಗಿ ಉಡಾವಣೆಗೊಂಡ ಕ್ಷಿಪಣಿಯೊಂದು ಪಾಕಿಸ್ತಾನಕ್ಕೆ ಸೇರಿದ ಪ್ರದೇಶದಲ್ಲಿ ಬಿದ್ದ ಘಟನೆ ಈ ವಾರದ ಆರಂಭದಲ್ಲಿ ನಡೆದಿರುವುದಾಗಿ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ. 'ತಾಂತ್ರಿಕ ಅಸಮರ್ಪಕತೆಯಿಂದಾಗಿ' ಈ ಘಟನೆ ನಡೆದಿದ್ದು, ಇದಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸುವುದಾಗಿ ಅದು ಹೇಳಿದೆ.

ಉಡಾವಣೆಗೊಂಡ ಕ್ಷಿಪಣಿಯು ಯಾವುದೆಂಬುದನ್ನು ರಕ್ಷಣಾ ಸಚಿವಾಲಯ ಬಹಿರಂಗಪಡಿಸಿಲ್ಲವಾದರೂ, ಅದು ಬಹ್ರ್ಮೋಸ್ ಸೂಪರ್ ಸೋನಿಕ್ ಕ್ರೂಸ್ ಕ್ಷಿಪಣಿಯಾಗಿತ್ತೆಂದು ರಕ್ಷಣೆ ಹಾಗೂ ಭದ್ರತಾ ಸಂಸ್ಥಾಪನೆಯ ಮೂಲಗಳು ತಿಳಿಸಿರುವುದಾಗಿ 'ದಿ ಪ್ರಿಂಟ್' ಸುದ್ದಿಜಾಲತಾಣ ವರದಿ ಮಾಡಿದೆ

2022ರ ಮಾರ್ಚ್ 9ರಂದು ನಿತ್ಯಕ್ರಮದಂತೆ ಕ್ಷಿಪಣಿಯ ನಿರ್ವಹಣೆಯನ್ನು ನಡೆಸುತ್ತಿದ್ದ ಸಂದರ್ಭ ತಾಂತ್ರಿಕ ಅಸಮರ್ಪಕತೆ ಯುಂಟಾಗಿದ್ದರಿಂದ ಅದು ಆಕಸ್ಮಿಕವಾಗಿ ಉಡಾವಣೆಗೊಂಡಿತು. ಭಾರತ ಸರಕಾರವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

"ಕ್ಷಿಪಣಿಯು ಪಾಕಿಸ್ತಾನಕ್ಕೆ ಸೇರಿದ ಪ್ರದೇಶದಲ್ಲಿ ಬಿದ್ದಿರುವುದಾಗಿ ತಿಳಿದುಬಂದಿದೆ. ಈ ಘಟನೆಗೆ ತೀವ್ರವಾಗಿ ವಿಷಾದಿಸುತ್ತೇವೆ'' ಎಂದು ಹೇಳಿಕೆ ತಿಳಿಸಿದೆ. ಆದರೆ ಈ ಆಕಸ್ಮಿಕದಲ್ಲಿ ಯಾವುದೇ ಸಾವು ಸಂಭವಿಸದಿರುವುದು ಸಮಾಧಾನಕರ ವಿಷಯವಾಗಿದೆ ಎಂದು ಅದು ರಕ್ಷಣಾ ಸಚಿವಾಲಯ ಹೇಳಿದೆ.

ಕ್ಷಿಪಣಿಯೊಂದರ ಉಡಾವಣೆಗೆ ಮುನ್ನ ಅದು ಅಪ್ಪಳಿಸಬೇಕಾದ ಗುರಿಯನ್ನು ನಿರ್ಧರಿಸಬೇಕಾಗುತ್ತದೆ ಮತ್ತು ಹಲವಾರು ಸ್ವಿಚ್ಗಳ ನಿರ್ವಹಣೆ ಸೇರಿದಂತೆ ಸೇರಿದಂತೆ ಹಲವಾರು ಪೂರ್ವಸಿದ್ಧತಾ ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ. ಹೀಗಿದ್ದೂ, ಭಾರತದ ಕಡೆಯಿಂದ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಗೊಂಡಿರುವುದು ಮಿಲಿಟರಿ ತಜ್ಞರನ್ನು ಚಕಿತಗೊಳಿಸಿದೆ. ಭಾರತದ ಕಡೆಯಿಂದ ಉಡಾವಣೆಯಾದ ಕ್ಷಿಪಣಿಯು ಪತನಗೊಳ್ಳುವ ಮುನ್ನ ತನ್ನ ವಾಯುಕ್ಷೇತ್ರದೊಳಗೆ 40 ಸಾವಿರ ಕಿ.ಮಿ. ಎತ್ತರದಲ್ಲಿ, 100 ಕಿ.ಮೀ. ಅಧಿಕ ದೂರದವರೆಗೆ ಸಂಚರಿಸಿತ್ತು ಮತ್ತು ಅದರ ವೇಗವು ಧ್ವನಿಯ ವೇಗಕ್ಕಿಂತ ಮೂರು ಪಟ್ಟು ಅಧಿಕವಾಗಿತ್ತು ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಕ್ಷಿಪಣಿಯಲ್ಲಿ ಸಿಡಿತಲೆ ಇಲ್ಲದೆ ಇದ್ದುದರಿಂದ ಅದು ಸ್ಫೋಟಗೊಳ್ಳಲಿಲ್ಲವೆಂದು ಪಾಕ್ ಹೇಳಿದೆ.

ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಅವರು ಹೇಳಿಕೆ ನೀಡಿದ ಮರುದಿನ ಭಾರತದ ರಕ್ಷಣಾ ಸಚಿವಾಲಯವು ಈ ಸ್ಪಷ್ಟನೆಯನ್ನು ನೀಡಿದೆ. '' ಮಾರ್ಚ್ 9ರಂದು, ಸಂಜೆ 6:43ಕ್ಕೆ ಭಾರೀ ವೇಗದ ಹಾರುವ ವಸ್ತುವೊಂದು ಭಾರತದ ಭೂಭಾಗದಿಂದ ಹಾರಿಬಂದಿತ್ತು. ಪ್ರಾರಂಭಿಕ ಹಂತದಲ್ಲಿ ಅದು ಪಥಬದಲಾಯಿಸಿ, ಪಾಕಿಸ್ತಾನದ ಪ್ರದೇಶದೊಳಗೆ ಪ್ರವೇಶಿಸಿ, ಪತನಗೊಂಡಿತು. ಇದರಿಂದಾಗಿ ನಾಗರಿಕ ಸಂಸ್ಥಾಪನೆಗಳಿಗೆ ಹಾನಿಯಾಗಿದೆ . ಆದರೆ ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ'' ಎಂದು ಬಾಬರ್ ಇಫ್ತಿಕಾರ್ ತಿಳಿಸಿದ್ದರು.

ಸೂಪರ್ಸಾನಿಕ್ ವೇಗದ ಬ್ರಹ್ಮೋಸ್

ಭಾರತೀಯ ಭೂಸೇನೆ ಹಾಗೂ ವಾಯುಪಡೆ ಇವೆರಡೂ ತಮ್ಮ ಶಸ್ತ್ರಾಸ್ತ್ರ ಬತ್ತಳಿಕೆಯಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಹೊಂದಿವೆ. ಭಾರತೀಯ ವಾಯುಪಡೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಎಸ್30 ಎಂಕೆಐ ಕ್ಷಿಪಣಿ ವಾಹಕ ವಿಮಾನದ ಮೂಲಕ ಉಡಾವಣೆಗೊಳಿಸುವ ಸಾಮರ್ಥ್ಯ ಹೊಂದಿದೆ. ಪರಿಷ್ಕೃತ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿಯು, ಶಬ್ದ 400 ಕಿ.ಮೀ.ಗೂ ಅಧಿಕ ದೂರದವರೆಗೆ ಸಂಚರಿಸಿ ಗುರಿಯನ್ನು ತಲುಪಬಲ್ಲದು.
 
ಹಡಗಿನ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆಗೊಳಿಸಿದಲ್ಲಿ ಅದು ಮೇಲಕ್ಕೆ ಜಿಗಿದು, ಸಾಗರಕ್ಕೆ ಸ್ವಲ್ಪ ಎತ್ತರದಲ್ಲಿ ಹಾರುತ್ತಾ ಗುರಿಯನ್ನು ತಲುಪುತ್ತದೆ.

 ನೆಲದಿಂದ ನೆಲಕ್ಕೆ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾವಣೆಗೊಳಿಸಿದಲ್ಲಿ ಅದು ತನ್ನ ಗುರಿಯು ಎಷ್ಟು ದೂರದಲ್ಲಿದೆ ಎಂಬುದನ್ನು ಆಧರಿಸಿ ಹಲವಾರು ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತದೆ ಮತ್ತು ಆನಂತರ ವಿವಿಧ ಮಟ್ಟಗಳಲ್ಲಿ ಸಂಚರಿಸುತ್ತಾ ಹೋಗುತ್ತದೆ.

ಭಾರತದ ಕಡೆಯಿಂದ ಉಡಾವಣೆಯಾದ ಕ್ಷಿಪಣಿಯನ್ನು ಹರ್ಯಾಣದ ಶಿರ್ಸಾದಲ್ಲಿ ಉಡಾವಣೆಗೊಂಡಿರಬೇಕೆಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಸಿರ್ಸಾದಲ್ಲಿ ಬ್ರಹ್ಮೋಸ್ ಉಡಾವಣಾ ನೆಲೆಯನ್ನು ಹೊಂದಿಲ್ಲ. ಆದಾಗ್ಯೂ ಬ್ರಹ್ಮೋಸ್ ಕ್ಷಿಪಣಿಯ ಉಡಾವಣೆಯನ್ನು ವಿಶೇಷವಾದ ಟ್ರಕ್ಗಳ ಮೂಲಕ ನಿರ್ವಹಿಸಲಾಗುತ್ತದೆ ಹಾಗೂ ಅದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬಹುದಾಗಿದೆ. ಇಂತಹ ಕ್ಷಿಪಣಿ ಪರೀಕ್ಷೆಗಳನ್ನು ಸಾಮಾನ್ಯವಾಗಿ ಭಾರತದ ಪೂರ್ವ ಭಾಗದಲ್ಲಿ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News