ಚಿಕ್ಕಮಗಳೂರು: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಆನ್‍ಲೈನ್ ಪರೀಕ್ಷೆಗೆ ನಡೆಸಲು ಆಗ್ರಹಿಸಿ ಮನವಿ
ಚಿಕ್ಕಮಗಳೂರು, ಮಾ.11: ಶಿರವಸ್ತ್ರದ ವಿವಾದದಿಂದಾಗಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಪರೀಕ್ಷೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ಆನ್‍ಲೈನ್ ಮೂಲಕ ಇಲ್ಲವೇ ಪರ್ಯಾಯ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಹಾಗೂ ಕೆಲ ಕಿಡಿಗೇಡಿಗಳು ಶಾಲಾ ಕಾಲೇಜುಗಳಿಗೆ ಅತಿಕ್ರಮವಾಗಿ ಪ್ರವೇಶಿಸಿ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಶುಕ್ರವಾರ ಸಮಿತಿ ಜಿಲ್ಲಾ ಸಂಚಾಲಕ ಗೌಸ್‍ಮೊಹಿದ್ದೀನ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಉಡುಪಿಯಲ್ಲಿ ಹುಟ್ಟಿಕೊಂಡ ಶಿರವಸ್ತ್ರದ ವಿವಾದ ಇಂದು ರಾಜ್ಯಾದ್ಯಂತ ಗಲಭೆ, ಘರ್ಷಣೆಗೆ ಕಾರಣವಾಗಿದೆ. ಶಿರವಸ್ತ್ರವನ್ನು ಮುಸ್ಲಿಂ ವಿದ್ಯಾರ್ಥಿನಿಯರು, ಮಹಿಳೆಯರು ಧಾರ್ಮಿಕ ಸಂಪ್ರದಾಯದ ಅಡಿಯಲ್ಲಿ ತಲಾತಲಾಂತರಗಳಿಂದ ಧರಿಸುತ್ತಿದ್ದಾರೆ. ವಿವಾದವನ್ನು ಸರಕಾರವೇ ಮಧ್ಯೆ ಪ್ರವೇಶಿಸಿ ಬಗೆಹರಿಸಬಹುದಿತ್ತು, ಆದರೆ ವಿವಾದ ದೊಡ್ಡ ಮಟ್ಟದಲ್ಲಿ ಘರ್ಷಣೆಗೆ ಕಾರಣವಾಗಿದ್ದು, ಇದಕ್ಕೆ ಸರಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ವಿವಾದದ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಒಂದೆಡೆ ನ್ಯಾಯಾಲಯದ ಮಧ್ಯಂತರ ತೀರ್ಪು ಸಿಡಿಸಿ ಕಾಲೇಜುಗಳಿಗೆ ಮಾತ್ರ ಅನ್ವಯವಾಗಲಿದೆ ಎನ್ನಲಾಗುತ್ತಿದೆ, ಮತ್ತೊಂದೆಡೆ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಶಿಕ್ಷಣ ಹಾಗೂ ಪರೀಕ್ಷೆಯಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ವಿವಾದದ ತೀರ್ಪು ನ್ಯಾಯಾಲಯದ ಹಂತದಲ್ಲಿದ್ದು, ಸಂಪೂರ್ಣ ಆದೇಶ ಬರುವವರೆಗೂ ಶಿಕ್ಷಣದಿಂದ ವಂಚಿತರಾಗಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಆನ್‍ಲೈನ್ ಪರೀಕ್ಷೆ ಅಥವಾ ಪರ್ಯಾಯ ಪರೀಕ್ಷೆ ನಡೆಸುವಂತೆ ಮುಖಂಡರು ಮನವಿ ಮಾಡಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರ ನಡೆಯುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸ ಪಡೆದು ಉದ್ಯೋಗ ಪಡೆಯಬೇಕೆಂಬ ಹಂಬಲದಲ್ಲಿದ್ದ ವಿದ್ಯಾರ್ಥಿನಿಯರಿಗೆ ಈ ನಿಲುವು ಗೊಂದಲ, ಆತಂಕ ಸೃಷ್ಟಿಸಿದೆ, ಕೂಡಲೇ ಸರಕಾರ ಸಂಪ್ರಾದಾಯದಂತೆ ಶಿರವಸ್ತ್ರ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ, ಟಿ.ಎಲ್.ಗಣೇಶ್, ಅಹಮದ್ ಭಾವಾ, ಗೌಸ್ ಮುನೀರ್, ಖಾನ್, ಅಯೂಬ್ ಹಾಜಿ, ಅಂಜುಮಾನ್, ಮೋಹನ್, ಜಮೀರ್ ಮೊಹಮ್ಮದ್ ಯೂಸಫ್ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಕಾಲೇಜಿಗೆ ಸಂಬಂಧವಿಲ್ಲದ ಕೆಲವು ಕೋಮುವಾದಿ ಗೂಂಡಾಗಳು ಕಾಲೇಜಿಗೆ ಪ್ರವೇಶಿಸಿ ಹಿಜಾಬ್ ವಿಚಾರದಲ್ಲಿ ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಅಕ್ರಮವಾಗಿ ಪ್ರವೇಶಿಸಿದ ಕಿಡಿಗೇಡಿಗಳು ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ. ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಜೀವಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಯಾವುದೇ ಕಾನೂನು ಕ್ರಮವಹಿಸಿಲ್ಲ. ವಿದ್ಯಾರ್ಥಿಗೆ ಪ್ರಾಣ ಬೆದರಿಕೆ ಹಾಕಿದ ಕಿಡಿಗೇಡಿಗಳನ್ನೂ ಕೂಡಲೇ ಬಂಧಿಸಬೇಕು. ತಪ್ಪಿದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು.
- ಗೌಸ್ ಮೊಹಿದ್ದೀನ್