×
Ad

ಮನೋವಿಜ್ಞಾನ ವಿಭಾಗದ 19 ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ಹೈಕೋರ್ಟ್ ತಡೆ

Update: 2022-03-11 22:29 IST

ಬೆಂಗಳೂರು, ಮಾ.11: ರಾಜ್ಯದ ವಿವಿಧ ಕಾಲೇಜುಗಳಲ್ಲಿನ ಮನೋವಿಜ್ಞಾನ ವಿಭಾಗದ 19 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ. 

ಆದರೆ, ರಾಜ್ಯದ ವಿವಿಧ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಖಾಲಿಯಿರುವ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಸಂಬಂಧ ನಿಗದಿಯಂತೆ ಶನಿವಾರ ಮತ್ತು ರವಿವಾರ (ಮಾ.12 ಮತ್ತು 13ರಂದು) ನಡೆಯಲಿದೆ.

ಪ್ರಾಣಿಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಷಯಗಳಿಗೆ ಪರಿವರ್ತಿಸಿರುವ 19 ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳೂ ಪರೀಕ್ಷೆ ಬರೆಯಬಹುದು. ಆದರೆ, ಈ 19 ಹುದ್ದೆಗಳ ತಾತ್ಕಾಲಿಕ ಪಟ್ಟಿ, ಅಂತಿಮ ಪಟ್ಟಿ ಪ್ರಕಟ ಸೇರಿದಂತೆ ಮುಂದಿನ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

ರಾಜ್ಯದ ವಿವಿಧ ಕಾಲೇಜುಗಳಲ್ಲಿನ ಮನೋವಿಜ್ಞಾನ ವಿಭಾಗದ 19 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಪರಿವರ್ತಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಬೆಂಗಳೂರಿನ ಡಾ. ಎನ್. ಮೀನಾಕ್ಷಿ ಸೇರಿ 10ಕ್ಕೂ ಅಧಿಕ ಸಹಾಯಕ ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ಆದೇಶ ನೀಡಿದೆ.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಮನೋವಿಜ್ಞಾನ ವಿಷಯದಿಂದ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿಗೆ ಪರಿವರ್ತನೆಗೊಂಡಿದ್ದ 19 ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿ, ವಿಚಾರಣೆಯನ್ನು ಎ.4ಕ್ಕೆ ಮುಂದೂಡಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News