ಮುಂಡಗೋಡ: ದಾಳಿಗೆ ಹೋಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮನೆಯಲ್ಲೇ ಕೂಡಿ ಹಾಕಿದ ಗ್ರಾಮಸ್ಥರು!

Update: 2022-03-12 05:23 GMT

ಮುಂಡಗೋಡ: ತಾಲ್ಲೂಕಿನ ಕೆಂದಲಗೇರಿ ಗ್ರಾಮದ ಮನೆಯೊಂದರಲ್ಲಿ ದಾಳಿಗೆಂದು ಬಂದಿದ್ದ ವಲಯ ಅರಣ್ಯ ಅಧಿಕಾರಿ ಸಹಿತ ಸಿಬ್ಬಂದಿಯನ್ನು ಗ್ರಾಮಸ್ಥರು ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ ಎನ್ನಲಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಇಲ್ಲಿನ ಮನೆಯೊಂದರಲ್ಲಿ ಜಿಂಕೆ ಬೇಟೆ ಆಡಿದ್ದಾರೆ ಎಂದು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯೊಂದರ ಮೇಲೆ ದಾಳಿ ಮಾಡಿದ್ದರು. ಆದರೆ, ಮನೆಯಲ್ಲಿ ಅಂತಹ ಯಾವುದೇ ಸೊತ್ತು ಪತ್ತೆಯಾಗಿಲ್ಲ. ದಾಳಿಯಿಂದ ಆಕ್ರೋಶಗೊಂಡ ಗ್ರಾಮಸ್ಥರು, ದಾಳಿಯ ನೇತೃತ್ವ ವಹಿಸಿದ್ದ ಆರ್.ಎಫ್.ಒ ಸುರೇಶ ಕುಲ್ಲೋಳ್ಳಿ ಸಹಿತ ಅರಣ್ಯ ಸಿಬ್ಬಂದಿಗೆ ಮನೆಯಲ್ಲಿಯೇ ದಿಗ್ಬಂಧನ ಹಾಕಿದರು.

ಪಿ.ಎಸ್.ಐ ಬಸವರಾಜ ಮಬನೂರು ಹಾಗೂ ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ನಂತರ ಅರಣ್ಯ ಸಿಬ್ಬಂದಿಯನ್ನು ಪೊಲೀಸ್ ಜೀಪಿನಲ್ಲಿ ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಯತ್ನಿಸಿದ್ದು ಆದರೆ, ಗ್ರಾಮಸ್ಥರು ಮತ್ತೆ ಅರ್ಧ ಗಂಟೆ ಕಾಲ ಅರಣ್ಯ ಸಿಬ್ಬಂದಿ ಹೋಗದಂತೆ ಜೀಪನ್ನು ತಡೆದರು. ಜಿಂಕೆ ಬೇಟೆ ಮಾಡಿದ್ದಾರೆ ಎಂದು ಮಾಹಿತಿ ಕೊಟ್ಟವರ ಹೆಸರು ಹೇಳಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಸುಮಾರು ಒಂದೂವರೆ ಗಂಟೆಗಳ ‍ಪ್ರಯತ್ನದ ಬಳಿಕ ಗ್ರಾಮಸ್ಥರ ಮನವೊಲಿಸಿದ ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕರೆದುಕೊಂಡು ಹೋದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News