ಅವಧಿಗೆ ಮೊದಲೇ ವಿಧಾನಸಭೆ ಚುನಾವಣೆ ಕಷ್ಟ ಸಾಧ್ಯ: ಸಿದ್ದರಾಮಯ್ಯ
ಕಲಬುರಗಿ,: ‘ಜಿಲ್ಲಾ ಪಂಚಾಯತ್ ಚುನಾವಣೆಯನ್ನೇ ಮಾಡದವರು ಅವಧಿಗೂ ಮೊದಲೇ ವಿಧಾನಸಭೆಗೆ ಚುನಾವಣೆ ನಡೆಸುತ್ತಾರೆಂದು ನನಗೇನು ಅನ್ನಿಸುತ್ತಿಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅವಧಿಗೆ ಮುನ್ನವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತದೆ ಎಂದು ನನಗೇನು ಅನಿಸುತ್ತಿಲ್ಲ. ನನಗಿರುವ ಮಾಹಿತಿ ಪ್ರಕಾರ ಬಿಜೆಪಿ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವುದಿಲ್ಲ. ಒಂದು ವೇಳೆ ಚುನಾವಣೆ ಬಂದರೆ, ಕಾಂಗ್ರೆಸ್ ಸಿದ್ಧವಾಗಿದೆ ಎಂದು ಹೇಳಿದರು.
‘ಸಿದ್ದರಾಮಯ್ಯರ ಹೆಸರನ್ನು ಭಾರತ ರತ್ನಗೆ ಶಿಫಾರಸು ಮಾಡಬೇಕು' ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಈಗಲ್‍ಟನ್ ರೆಸಾರ್ಟ್‍ಗೆ ದಂಡ ಹಾಕಿದ್ದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಕೋರ್ಟ್ ನಮ್ಮ ಸರಕಾರದ ತೀರ್ಮಾನವನ್ನು ಎತ್ತಿ ಹಿಡಿದಿದೆ. 982 ಕೋಟಿ ರೂ.ದಂಡ ವಿಧಿಸಲಾಗಿದೆ. ಇದೀಗ ಕುಮಾರಸ್ವಾಮಿ ರೆಸಾರ್ಟ್ ಪರವಾಗಿ ಮಾತನಾಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.
ಇಂತಹ ವಿಚಾರಗಳಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನನ್ನ ಕಂಡರೆ ಅವರಿಗೆ ಭಯ. ಹೀಗಾಗಿ, ನನ್ನ ವಿರುದ್ಧ ಮಾತನಾಡುತ್ತಾರೆ ಎಂದ ಅವರು, ಎಲ್ಲ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದ್ದೆ ಇರುತ್ತವೆ. ಇದೇ ಈಶ್ವರಪ್ಪ ರಾಜ್ಯಪಾಲರಿಗೆ ಸಿಎಂ ವಿರುದ್ಧ ಪತ್ರ ಬರೆದಿದ್ದರು. ಯತ್ನಾಳ್ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅದು ಭಿನ್ನಾಭಿಪ್ರಾಯ ಅಲ್ಲವೇ? ಎಂದು ಕೇಳಿದರು.
‘ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಹೋದವರಿಗೆ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜನರು ಸಾಧನೆ ಮೇಲೆ ಮತ ಹಾಕುವುದು ಕಡಿಮೆ. ಹೀಗಾಗಿಯೇ ಬಿಜೆಪಿಯರು ಹಿಂದುತ್ವದ ಆಧಾರದ ಮೇಲೆ ಮತ ಕೇಳುತ್ತಿದ್ದು, ಜನರ ಭಾವನೆಗಳನ್ನು ಕೆರಳಿಸಿ ಮತ ಪಡೆಯುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ' ಎಂದು ಸಿದ್ದರಾಮಯ್ಯ ಟೀಕಿಸಿದರು.