×
Ad

ಕಾಂಗ್ರೆಸ್ ಇತಿಹಾಸದ ಪುಟ ಸೇರಲಿದೆ: ಗೋವಿಂದ ಕಾರಜೋಳ

Update: 2022-03-12 17:50 IST

ಬೆಳಗಾವಿ, ಮಾ. 12: ‘ಮುಂದಿನ ಚುನಾವಣೆಯಲ್ಲಿ ಬಿಜೆಪಿ 130ರಿಂದ 140 ಸ್ಥಾನಗಳನ್ನು ಗಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಬಿಜೆಪಿ 150 ಸ್ಥಾನಗಳನ್ನು ನಿಶ್ಚಿತವಾಗಿಯೂ ಗಳಿಸಲಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು' ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಟೀಕಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಹೊಸ ನಾಯಕತ್ವದ ಅಜೆಂಡಾ ನಮ್ಮ ಮುಂದೆ ಇಲ್ಲ. ಹೈಕಮಾಂಡ್ ಮುಂದೆಯೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ 2023ರ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು' ಎಂದು ಹೇಳಿದರು.

‘ಒಂದು ಸಾರಿ ಆಡಳಿತ ಬಂದ ಪಕ್ಷದ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ಹಾಗೂ ಸಾಮಾಜಿಕ ನ್ಯಾಯದಡಿ ಮಾಡಿದ ಕೆಲಸ ಪರಿಶೀಲನೆ ಮಾಡಿ ಜನ ಮತ ಹಾಕುತ್ತಾರೆ. ಪ್ರಧಾನಿ ಮೋದಿ ಮಾಡಿದ ಕಾರ್ಯಕ್ಕೆ ಜನ ಅನುಮೋದನೆ ಕೊಟ್ಟಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್‍ನ ಭಂಡತನಕ್ಕೆ ಜನ ಪಾಠ ಕಲಿಸಿದ್ದಾರೆ ಎಂದು ಗೋವಿಂದ ಕಾರಜೋಳ ಕಿಡಿಕಾರಿದರು.

ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮುನ್ನ ಉತ್ತರಾಖಂಡ, ಗೋವಾಗೆ ಕಾಂಗ್ರೆಸ್ ನಾಯಕರು ವಿಶೇಷ ವಿಮಾನ ತೆಗೆದುಕೊಂಡು ಹೋಗಿ ಕುಳಿತಿದ್ದರು. ಈಗ ಮೂರನೆ ಬಾರಿ ಗೋವಾದಲ್ಲಿ ಬಿಜೆಪಿ ಸರಕಾರ ರಚನೆ ಮಾಡುತ್ತಿದೆ. ಜನ ನಮ್ಮನ್ನ ಒಂದು ಸಾರಿ ಆಡಳಿತಕ್ಕೆ ತಂದ ಮೇಲೆ ಎರಡನೆ ಬಾರಿ ಅಧಿಕಾರಕ್ಕೆ ತರಲು ಯೋಚನೆ ಮಾಡುತ್ತಾರೆ. ಆದರೆ, ಆ ರಾಜ್ಯದಲ್ಲಿ ಮೂರನೇ ಬಾರಿ ಆಡಳಿತಕ್ಕೆ ಬಂದಿದ್ದೇವೆ ಎಂದರು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಸಚ್ಚಾರಿತ್ರ ಆಡಳಿತ, ಸಾಮಾಜಿಕ ನ್ಯಾಯಕ್ಕೆ ಸಿಕ್ಕಂತ ಜಯ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಿದ್ದಾರೆ. ಯುವಕರು ಜಾತಿ ವ್ಯವಸ್ಥೆಗೆ ಅಂಟಿಕೊಂಡಿಲ್ಲ. ದೇಶದ ಘನತೆ ಗೌರವ ಎತ್ತಿ ಹಿಡಿಯುವಂತಹ ಪಕ್ಷಕ್ಕೆ ಅವರು ಬೆಂಬಲಿಸುತ್ತಿದ್ದಾರೆ. ಅವರಿಗೆ ಜಾತಿ-ಧರ್ಮ ಮುಖ್ಯವಲ್ಲ. ಯುವಕರು ದೇಶದ ಏಕತೆ, ಐಕ್ಯತೆ ಸಮಗ್ರ ಅಭಿವೃದ್ಧಿ ಬಯಸಿದ್ದಾರೆ ಎಂದು ಅವರು ತಿಳಿಸಿದರು.

ಇಡೀ ದೇಶಕ್ಕೆ ಈ ಚುನಾವಣಾ ಫಲಿತಾಂಶ ದಿಕ್ಸೂಚಿ. ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಇತಿಹಾಸದ ಪುಟ ಸೇರುತ್ತದೆ. ಸಿದ್ದರಾಮಯ್ಯ ಚುನಾವಣೆ ಬರುವವರೆಗೂ ಕಾಯಲಿ. ಕಾಂಗ್ರೆಸ್ 60 ವರ್ಷ ಜಾತಿ-ಧರ್ಮದಲ್ಲಿ ಆಡಳಿತ ಮಾಡಿ ಮೂಲೆ ಗುಂಪಾಗುತ್ತಿದೆ. ಕಾಂಗ್ರೆಸ್‍ನವರಿಗೆ ಜಾತಿ, ಮತೀಯ, ಧರ್ಮದ ಭಾವನೆ ಎಬ್ಬಿಸುವುದೆ ಕೆಲಸವಾಗಿದೆ' ಎಂದು ಕಾರಜೋಳ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News