ಕಾಂಗ್ರೆಸ್-ಬಿಜೆಪಿ ವಿರುದ್ಧ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

Update: 2022-03-12 15:03 GMT
ಎಚ್.ಡಿ.ದೇವೇಗೌಡ

ಬೆಂಗಳೂರು, ಮಾ.12: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ವಿರುದ್ಧ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುತ್ತೇವೆ, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಶನಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಒಬ್ಬರೋ ಇಬ್ಬರೋ ಪಕ್ಷ ಬಿಟ್ಟರೆ ನಾವು ಹೆದರಿಕೊಳ್ಳುವುದಿಲ್ಲ. ಜನರ ಮುಂದೆ ಹೋಗುವುದೇ ನಮ್ಮ ನಿರ್ಣಯ. ಅವಧಿಗೂ ಮುನ್ನ ಚುನಾವಣೆ ಆದರೆ ಅದನ್ನು ಎದುರಿಸಲು ನಮ್ಮ ಪಕ್ಷ ಸಿದ್ಧವಿದೆ ಎಂದರು.

ಐದು ರಾಜ್ಯಗಳ ಫಲಿತಾಂಶದಲ್ಲಿ ತೀರ್ಪು ಬಿಜೆಪಿ ಪರ ಇದೆ. ನಾನು ಸ್ಥಳೀಯ ಕಾಂಗ್ರೆಸ್ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂತು. ಇಲ್ಲಿಯವರೆಗೆ ಬಿಜೆಪಿಯನ್ನು ಹಿಮ್ಮುಖ ಮಾಡಲು ಸಾಧ್ಯವಾಗಿಲ್ಲ ಅನ್ನೋದು ವಾಸ್ತವಾಂಶ ಎಂದು ದೇವೇಗೌಡ ತಿಳಿಸಿದರು.

ನಾನು ಬಿಜೆಪಿ ಬಜೆಟ್ ನೋಡಿದ್ದೇನೆ. ಕೃಷ್ಣ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ರೂ.ಇಟ್ಟಿದ್ದಾರೆ, ಇದು ಯಾವ ಖುಷಿಗೆ? ನನ್ನ ಜಿಲ್ಲೆಯ ಒಂದು ಕುಡಿಯುವ ನೀರಿನ ಯೋಜನೆಗೆ ಮೂರು ಸಾವಿರ ಕೋಟಿ ರೂ.ಇಟ್ಟಿದ್ದಾರೆ ಅದರ ಯೋಜನಾ ವೆಚ್ಚ 8 ಸಾವಿರ ಕೋಟಿ ಇದೆ. ಏನು ಮಾಡುತ್ತಾರೆ ಈ ಮೂರು ಸಾವಿರ ಕೋಟಿಯಲ್ಲಿ? ನಾನು ಪ್ರಧಾನಿ ಆಗಿದ್ದಾಗ ಕಾವೇರಿ ಬೇಸಿನ್‍ಗೆ ಅನುದಾನ ಕೊಟ್ಟಿದ್ದೆ ಎಂದು ಅವರು ಹೇಳಿದರು.

ನೀರು ತರುತ್ತೇವೆ ಎಂದು ಎರಡು ತಿಂಗಳ ಹಿಂದೆ ಕಾಂಗ್ರೆಸ್‍ನವರು ಪಾದಯಾತ್ರೆ ಮಾಡಿದರು. ನೀರಾವರಿ ಯೋಜನೆಗೆ ನಾನು ಏನೇನು ಕೊಟ್ಟಿದ್ದೀನಿ ಜನರ ಮುಂದೆ ಇದೆ. ಬೇರೆ ಬೇರೆ ಸರಕಾರಗಳು ಏನು ಮಾಡಿದವು ಅನ್ನುವುದು ಈಗ ಬೇಡ. ರಾಮನಗರದಿಂದಲೇ ಪಾದಯಾತ್ರೆ ಹೊರಡಬೇಕು ಅಂತ ಕಾಂಗ್ರೆಸ್ ನಾಯಕರು ಹೇಳಿದರು. ನಾನು ಚನ್ನಪಟ್ಟಣ, ರಾಮನಗರ ಮತ್ತು ಬೆಂಗಳೂರಿಗೆ ನೀರು ತರಿಸಿದೆ ಎಂದು ದೇವೇಗೌಡ ತಿಳಿಸಿದರು.

ಬಿಜೆಪಿ, ಜೆಡಿಎಸ್ ಏನು ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದರು, ನೀವೇ ಉಳಿಸಿಕೊಡಬೇಕು ಅಂತ ನನ್ನ ಮನೆಗೆ ಬಂದಿದ್ದರು ಆಗ. ಈಗ ಕಾವೇರಿ ಕೊಳ್ಳದಲ್ಲಿ ನೀರು ತಂದೇಬಿಟ್ಟೆವು ಎಂದು ಕಾಂಗ್ರೆಸ್‍ನವರು ಹೇಳುತ್ತಾರೆ. ಜೆಡಿಎಸ್ ಪಕ್ಷವನ್ನು ಉಳಿಸಬೇಕೆನ್ನುವ ಬದ್ಧತೆ ಯಾರಿಗೆ ಇದೆಯೋ ಅಂಥವರಿಂದ ಸಂಘಟನೆ ಮಾಡುತ್ತೇವೆ. ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆಯನ್ನು ನಿಷ್ಠೆಯಿಂದ ಮಾಡುತ್ತಾರೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಈ ಭಾವನೆ ನಮ್ಮಲ್ಲೂ ಬರಬೇಕು, ಅದಕ್ಕಾಗಿ ಮಾ.20ರಂದು ಬೆಂಗಳೂರಿನಲ್ಲಿ ಪಕ್ಷದ ಸಮಾವೇಶ ಮಾಡುತ್ತೇವೆ ಎಂದು ಅವರು ಹೇಳಿದರು.

ಮಾ.20ರಂದು ಮುಂದಿನ ಹೋರಾಟದ ಕಾರ್ಯಕ್ರಮ ರೂಪಿಸುತ್ತೇವೆ. ಎರಡೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ, ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ. ನಾನು ಪ್ರಧಾನಿ ಆದ ಮೇಲೆ ಇಲ್ಲಿ ಜೆ.ಎಚ್.ಪಟೇಲ್ ಹಾಗೂ ಸಿದ್ದರಾಮಯ್ಯ ಮೂರುವರೆ ವರ್ಷ ಆಡಳಿತ ಮಾಡಿದರು. ಬಳಿಕ ನಡೆದ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದರು. ಒಬ್ಬ ಕನ್ನಡಿಗ ಪ್ರಧಾನಮಂತ್ರಿ ಆಗೋದನ್ನು ಸಹಿಸಲು ಕೆಲವರಿಗೆ ಆಗಲಿಲ್ಲ ಎಂದು ದೇವೇಗೌಡ ತಿಳಿಸಿದರು.

ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಜೆಡಿಎಸ್ ಸೇರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಹಲವಾರು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಆದರೆ, ನನ್ನ ಬಳಿ ಬಂದು ಅವರು ಇನ್ನೂ ಪಕ್ಷಕ್ಕೆ ಸೇರುವ ಬಗ್ಗೆ ಚರ್ಚೆ ಮಾಡಿಲ್ಲ. ಕಾಂಗ್ರೆಸ್‍ನಲ್ಲಿ ಅವರಿಗೆ ಸಾಕಷ್ಟು ಪೆಟ್ಟು ಕೊಟ್ಟರು. ಆ ನೋವು ಅವರಿಗೆ ಇದೆ, ಮುಂದೇನಾಗುತ್ತೆ ನೋಡೋಣ ಎಂದರು.

ಬಜೆಟ್ ಭಾಷಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಅನಾವಶ್ಯಕ ಏನಾದರೂ ಮಾತಾಡಿದ್ದಾರಾ? ಪ್ರತಿಯೊಂದು ಅಂಕಿ ಅಂಶದ ಜೊತೆ ಮಾತಾಡಿದ್ದಾರೆ. ಜನ ಮೆಚ್ಚಿಸಲು ಹಾಗೆ ಹೀಗೆ ಮಾತನಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News