×
Ad

ಬಂಗಾಲದಲ್ಲಿ ಬಿಜೆಪಿ ಕೊಚ್ಚಿ ಹೋಯಿತು ಆ ಬಗ್ಗೆ ಏಕೆ ಮಾತನಾಡುತ್ತಿಲ್ಲ: ಡಿ.ಕೆ.ಶಿವಕುಮಾರ್ ಪ್ರಶ್ನೆ

Update: 2022-03-12 19:50 IST

ಬೆಂಗಳೂರು: ‘ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ, ಕಾಂಗ್ರೆಸ್ ಕಾರ್ಯಕರ್ತರು ಕುಗ್ಗಿದ್ದಾರೆಂದು ಅನೇಕರು ಹೇಳುತ್ತಿದ್ದಾರೆ. ಇಂತಹ ಮಾತುಗಳು ಸಹಜ. ಪಂಜಾಬ್‍ನಲ್ಲಿ ನಮ್ಮ ಸರಕಾರ ಇತ್ತು, ನಾವು ಸೋತಿದ್ದೇವೆ. ಬೇರೆ ರಾಜ್ಯಗಳಲ್ಲಿ ಪ್ರಮಾಣ ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ಆದಾಗ ಬಿಜೆಪಿ ಕೊಚ್ಚಿ ಹೋಯ್ತು ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ನಮಗೆ ಈಗ ತಾತ್ಕಾಲಿಕ ಹಿನ್ನಡೆ. ನಮ್ಮ ಇತಿಹಾಸ, ನಮ್ಮ ನಾಯಕತ್ವ, ನಮ್ಮ ಶಕ್ತಿಯಿಂದ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ. ಕಾಂಗ್ರೆಸ್ ಇಲ್ಲದಿದ್ದರೆ ದೇಶ ಛಿದ್ರವಾಗುತ್ತದೆ. ವಿದೇಶದಲ್ಲಿರುವವರು ಅಭದ್ರತೆ ಎದುರಿಸುತ್ತಿದ್ದಾರೆ. ಈ ದೇಶಕ್ಕೆ ಭವಿಷ್ಯ ಸಿಗಬೇಕಾದರೆ, ನಮ್ಮ ಆರ್ಥಿಕ ನೀತಿ, ಉದಾರಿಕರಣ ನೀತಿ ಎಲ್ಲವೂ ಶಕ್ತಿ ತುಂಬಲಿದೆ' ಎಂದು ತಿಳಿಸಿದರು.

‘ನೀವೆಲ್ಲ ಕನಸು ಕಾಣಬೇಕು, ಕನಸು ನನಸಾಗಿಸಲು ಹಂಬಲಿಸಬೇಕು, ಕನಸಿಗಾಗಿ ಶಿಸ್ತು ಇಟ್ಟುಕೊಳ್ಳಬೇಕು, ಕನಸಿಗೆ ಬದ್ಧತೆ ತೋರಿಸಬೇಕು. ಕನಸು ಜೀವನಕ್ಕೆ ಸ್ಫೂರ್ತಿ, ನಂಬಿಕೆ ಕನಸಿಗೆ ಸ್ಫೂರ್ತಿ, ಪ್ರೀತಿ ಹೃದಯಕ್ಕೆ ಸ್ಫೂರ್ತಿ, ನಗು ಎಲ್ಲದಕ್ಕೂ ಸ್ಫೂರ್ತಿ. ಹಾಗೇ ನೀವು ಸದಾ ನಗುತ್ತಾ ಜನರ ವಿಶ್ವಾಸಗಳಿಸಿ ಎಂದು ಶುಭ ಹಾರೈಸುತ್ತೇನೆ' ಎಂದು ಅವರು ಹೇಳಿದರು.

‘ಗೋವಾದಲ್ಲಿ ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್‍ನಲ್ಲಿ ಕೇವಲ ಇಬ್ಬರು ಶಾಸಕರು ಮಾತ್ರ ಇದ್ದರು. ಈಗ ಮತ್ತೆ 12 ಶಾಸಕರು ಗೆದ್ದಿದ್ದಾರೆ. ಹಿಂದೆ ವಾಜಪೇಯಿ ಹಾಗೂ ಅಡ್ವಾಣಿ ಮಾತ್ರ ಸಂಸತ್ತಿನಲ್ಲಿದ್ದರು. ರಾಜಕೀಯದಲ್ಲಿ ಯಾವುದೂ ಯಾವತ್ತೂ ಶಾಶ್ವತವಲ್ಲ. ಅನೇಕ ನಾಯಕರು ಪಕ್ಷ ಬಿಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಅವರಿಗೆ ಅಧಿಕಾರದಾಹ ಅದಕ್ಕೆ ಪಕ್ಷ ಬಿಡುತ್ತಿದ್ದಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣವೇ ಹೊರತು, ಕಾಂಗ್ರೆಸ್ ಹೊರತಾಗಿ ಅವರು ಬೆಳೆಯಲಿಲ್ಲ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧಿಸಿದ್ದಕ್ಕೆ ಅಲ್ಲವೆ ನಾನು ಮಾಜಿ ಮಂತ್ರಿ, ಶಾಸಕನಾಗಿರುವುದು, ಅಧ್ಯಕ್ಷನಾಗಿರುವುದು. ಈಗ ಪಕ್ಷ ತೊರೆದವರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದಕ್ಕೆ ಆ ಮಟ್ಟಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ ಎಂದು ಟೀಕಿಸಿದರು.

ಯುವಕರ ಧ್ವನಿ ಕಾಂಗ್ರೆಸ್ ಅಧ್ಯಕ್ಷರ ಧ್ವನಿಯಾಗಬೇಕು, ಹೀಗಾಗಿ ನಾನು ಇಲ್ಲಿ ನಿಮ್ಮ ಮಾತುಗಳನ್ನು ಕೇಳಲು ಬಂದಿದ್ದೇನೆ. ಇಲ್ಲಿ ಅನೇಕರು ನಿರುದ್ಯೋಗ, ಸದಸ್ಯತ್ವ ಹಾಗೂ ಜನರ ಸಮಸ್ಯೆ ಬಗ್ಗೆ ಮಾತನಾಡಿದ್ದೀರಿ. ಬಿಜೆಪಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆಂದಿತ್ತು. ಆದರೆ ಅವರು ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿ ಎಂದು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾವನಾತ್ಮಕ ವಿಚಾರವಾಗಿ ಜನರನ್ನು ಸೆಳೆಯುವುದು ನಮ್ಮ ಉದ್ದೇಶವಲ್ಲ. ಅವರಿಗೆ ಕೇವಲ ಆರ್ಟಿಕಲ್ 370, ಗೋಹತ್ಯೆ, ಮತಾಂತರ ನಿಷೇಧದಂತಹ ವಿಚಾರ ಬಿಟ್ಟು ಅಭಿವೃದ್ಧಿ ಯೋಜನೆಗಳಿವೆಯೇ? ನಾವು ಕೊಟ್ಟ ಶಿಕ್ಷಣ ಹಕ್ಕು, ಆಹಾರ ಭದ್ರತೆ, ಉದ್ಯೋಗ ಭದ್ರತೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರಾ? ಏಳು ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರಕಾರ ಯಾವುದಾದರೂ ಒಂದು ವರ್ಗಕ್ಕೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆಯಾ? ಅವರ ಅಜೆಂಡಾ ಬೇರೆ. ದೇವಾಲಯ, ಜಾತಿ, ಧರ್ಮ ವಿಚಾರವಾಗಿ ಸಮಾಜ ಒಡೆಯುವುದು ಅವರ ಅಜೆಂಡಾ' ಎಂದು ಅವರು ವಾಗ್ದಾಳಿ ನಡೆಸಿದರು.

ನಿಮಗೆ ಮೊದಲು ಪಕ್ಷ ನಿಷ್ಠೆ ಇರಬೇಕು. ನಿಮಗೆ ತಾಳ್ಮೆ ಇದ್ದರೆ ಇವತ್ತಲ್ಲಾ ನಾಳೆ ನೀವು ನಾಯಕನಾಗಿ ಬೆಳೆಯುತ್ತೀರಿ. ನಿಮ್ಮಲ್ಲಿ ಸದಸ್ಯತ್ವ ಮಾಡಿ ಚುನಾವಣೆ ಎದುರಿಸಿದ್ದೀರಿ. ಕೆಲವರು ಗೆದ್ದಿದ್ದೀರಿ. ಕೆಲವರು ಸೋತಿದ್ದೀರಿ. ಈಗ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸದಸ್ಯತ್ವವೇ ಭದ್ರ ಅಡಿಪಾಯ. ನೀವು ಅಧಿಕಾರಕ್ಕೆ ಬರಲು ನೀವು ಸದಸ್ಯತ್ವ ಮಾಡಿದಿರಿ. ಪಕ್ಷ ಅಧಿಕಾರಕ್ಕೆ ಬರಲು ಏಕೆ ಸದಸ್ಯತ್ವ ಮಾಡುತ್ತಿಲ್ಲ? ಇದಕ್ಕೆ ನನಗೆ ಉತ್ತರ ಬೇಕು' ಎಂದು ಶಿವಕುಮಾರ್ ತಿಳಿಸಿದರು.

‘ಅವಕಾಶ ನಿಮ್ಮ ಮನೆ ಬಾಗಿಲಿಗೆ ಹುಡುಕಿ ಬರುವುದಿಲ್ಲ, ನೀವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು. ನೀವು ಪಕ್ಷವನ್ನು ಪ್ರೀತಿಸುವುದೇ ಆದರೆ, ನೀವು ಪಕ್ಷಕ್ಕೆ ನಿಷ್ಠೆಯಿಂದಿರಿ, ಪಕ್ಷದ ಸದಸ್ಯತ್ವ ಹೆಚ್ಚಿಸಿ. ಯುವ ಕಾಂಗ್ರೆಸಿಗರು 2 ಸಾವಿರ ಸದಸ್ಯರ ನೇಮಕ ಮಾಡಿರುವುದಾಗಿ ಹೇಳಿದ್ದಾರೆ. ನಿಮ್ಮ ಸಾಮರ್ಥ್ಯಕ್ಕೆ ಈ ಗುರಿ ನಾಚಿಕೆ ತರುವಂತಹದ್ದಾಗಿದೆ. ನೀವು ಪದಾಧಿಕಾರಿಗಳಾಗಲು 80 ಸಾವಿರ, ಲಕ್ಷದವರೆಗೂ ಸದಸ್ಯರನ್ನು ಮಾಡಿದ್ದೀರಿ. ಅದರಲ್ಲಿ ಅರ್ಧದಷ್ಟು ಮಾಡಲು ಸಾಧ್ಯವಿಲ್ಲವೇ? ನಿಮ್ಮಲ್ಲಿ ಯಾರಾದರೂ ನಾಲ್ಕು ಜನ 50 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಮಾಡಿದರೆ, ಅವರನ್ನು ಕೆಪಿಸಿಸಿ ಕಾರ್ಯದರ್ಶಿಗಳಾಗಿ ನೇಮಕ ಮಾಡುತ್ತೇನೆ' ಎಂದು ತಿಳಿಸಿದರು.

ನೀವು ಈಗ ಮಾಡುವ ಸದಸ್ಯತ್ವ ಪಕ್ಷಕ್ಕಾಗಿ ಮಾಡುತ್ತಿರುವುದು. ಖಾಲಿ ಮಾತನಾಡಿದರೆ ನಾನು ಒಪ್ಪುವುದಿಲ್ಲ. ನೀವು ನಾಯಕರಾಗಿ ಬೆಳೆಯಬೇಕಾದರೆ ನಿಮ್ಮ ಪರಿಶ್ರಮ ಹಾಗೂ ಸಾಧನೆ ಮುಖ್ಯ. ಶ್ರೀನಿವಾಸ್ ಅವರಿಗೆ ಕುಟುಂಬ, ಹಣ, ಯಾವ ಬೆಂಬಲವೂ ಇಲ್ಲದಿದ್ದರೂ ನಮ್ಮ ನಾಯಕರು ಅವರನ್ನು ಯಾಕೆ ಗುರುತಿಸಿದ್ದಾರೆ? ನಿಮಗೆ ಅವರಿಗಿಂತಾ ದೊಡ್ಡ ಸ್ಫೂರ್ತಿ ಬೇಕಾ? ಪರಿಶ್ರಮ ಫಲ ಕೊಡುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ. ನಾನು ಯುವಕರು ಹಾಗೂ ಮಹಿಳೆಯರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇನೆ. ಈ ಇಬ್ಬರು ಇಡೀ ದೇಶದ ಚಿತ್ರಣವನ್ನೇ ಬದಲಿಸಬಲ್ಲರು ಎಂದು ಅವರು ತಿಳಿಸಿದರು.

ಪ್ರಿಯಾಂಕ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಗೆದ್ದರೋ ಸೋತರೋ, ಆದರೆ 400 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ತಯಾರು ಮಾಡಿ ಪರಿಶ್ರಮ ಹಾಕಿದರಲ್ಲ ಅದು ಮುಖ್ಯ. ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಒಟ್ಟಾಗಿರಲು ಸಾಧ್ಯವಿಲ್ಲ, ಕಾಂಗ್ರೆಸ್ ಇಲ್ಲದೆ ದೇಶ ಒಟ್ಟಾಗಿರಲು ಸಾಧ್ಯವಿಲ್ಲ. ದೇಶದಲ್ಲಿ ಏನಾಗುತ್ತಿದೆ ಎಂದು ಜನರಿಗೆ ಅರಿವು ಮೂಡಿಸಲು ನಾವು ವಿಫಲವಾಗಿದ್ದೇವೆ ಎಂದು ಹೇಳಿದರು.

ನೀವು ನಿರುದ್ಯೋಗಿಗಳ ಅಂಕಿ-ಅಂಶ ಪಡೆಯಿರಿ. ನಂತರ ತಾಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ಮಾಡೋಣ. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಂದೇಶ ರವಾನಿಸೋಣ. ತಾಲೂಕಿನಲ್ಲಿ 5 ಸಾವಿರ ನಿರುದ್ಯೋಗಿಗಳು ಸಿಗುವುದಿಲ್ಲವೇ? ಮುಂದಿನ ಒಂದು ತಿಂಗಳು ಇದನ್ನೇ ಮಾಡಿ. ತಾಲೂಕಿಗೆ 5 ಸಾವಿರದಂತೆ 200 ಕ್ಷೇತ್ರಗಳಲ್ಲಿ 10 ಲಕ್ಷ ಜನ ಸಿಗುತ್ತಾರೆ. ಡಿವಿಷನ್‍ನಲ್ಲಿ 1 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡಿದರೆ ಒಂದು ಸರಕಾರವನ್ನು ತೆಗೆಯಲು ಆಗುವುದಿಲ್ಲವೇ?' ಎಂದು ಹುರಿದುಂಬಿಸಿದರು.

‘ನಾನು ನಿಮ್ಮ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೇನೆ. ನಿಮ್ಮಲ್ಲಿ ಏನೆ ಭಿನ್ನಾಭಿಪ್ರಾಯವಿದ್ದರೂ ಬಿಡಬೇಕು. ಸ್ಪರ್ಧೆ ಇರಬೇಕು. ನೀವು ತ್ಯಾಗದ ಮನಸ್ಥಿತಿ ಇಟ್ಟುಕೊಳ್ಳಲಿಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸೆ ಇರುತ್ತದೆ, ಅವಕಾಶ ಸಿಗುತ್ತದೆ. ಸದ್ಯ ಬಿಜೆಪಿಯವರು ಬೀಗುತ್ತಿದ್ದಾರೆ, ಬೀಗಲಿ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಎರಡು ಪಾಲಿಕೆ ಸೀಟುಗಳನ್ನು ಸೋತಿದ್ದಾರೆ. ಪಕ್ಕದ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಯಾರು ಏನೇ ಹೇಳಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಅಧಿಕಾರಕ್ಕೆ ತರುತ್ತಾರೆ ಎನ್ನುವ ನಂಬಿಕೆ ಇದೆ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ 

‘ನಿಮ್ಮಲ್ಲಿ ಯಾರೂ ಕಾರ್ಯಪ್ರವೃತ್ತವಾಗಿರುವುದಿಲ್ಲವೋ ನೀವು ಚುನಾಯಿತ ಪ್ರತಿನಿಧಿಯಾಗಿದ್ದರೂ ನಿಮ್ಮನ್ನು ಕಿತ್ತುಹಾಕುತ್ತೇವೆ. ನೀವು ಕೆಲಸ ಮಾಡದಿದ್ದರೆ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಬೇರೆಯವರಿಗೆ ಅವಕಾಶ ಕೊಟ್ಟು ಹೋಗಬಹುದು. ನೀವು ಗುರಿ ಇಟ್ಟುಕೊಳ್ಳದೆ ಪಕ್ಷ ಕಟ್ಟಲು ಹೇಗೆ ಸಾಧ್ಯ? ಈ ವಿಚಾರವಾಗಿ ನಾನು ಯುವ ಕಾಂಗ್ರೆಸ್ ಅಧ್ಯಕ್ಷ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ, ದಿಲ್ಲಿ ನಾಯಕರ ಜತೆ ಮಾತನಾಡುತ್ತೇನೆ. ಈ ಪರಿಸ್ಥಿತಿಯಲ್ಲಿ ನೀವು ಮಾಡದಿದ್ದರೆ, ಯಾವಾಗ ಮಾಡುತ್ತೀರಿ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News