ಜಮ್ಮು-ಕಾಶ್ಮೀರ ಆಡಳಿತವು ಪತ್ರಕರ್ತರನ್ನು ಉಗ್ರರ ಬಗ್ಗೆ ಸಹಾನುಭೂತಿ ಹೊಂದಿದವರೆಂದು ಭಾವಿಸಿದೆ: ಪಿಸಿಐ ವರದಿ

Update: 2022-03-12 15:51 GMT
photo courtesy:twitter/@kamranyousuf

ಹೊಸದಿಲ್ಲಿ,ಮಾ.12: ಮುಖ್ಯವಾಗಿ ಸ್ಥಳೀಯ ಆಡಳಿತವು ಹೇರಿರುವ ವಿಸ್ತ್ರತ ನಿರ್ಬಂಧಗಳು ಜಮ್ಮು-ಕಾಶ್ಮೀರದಲ್ಲಿಯ ಪತ್ರಕರ್ತರ ಕಾರ್ಯ ನಿರ್ವಹಣೆಯನ್ನು ನಿಧಾನವಾಗಿ ಉಸಿರುಗಟ್ಟಿಸುತ್ತಿವೆ ಎಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ತನ್ನ ಸತ್ಯಶೋಧನಾ ವರದಿಯಲ್ಲಿ ಹೇಳಿದೆ.

ಹೆಚ್ಚಿನ ಕಾಶ್ಮೀರಿ ಪತ್ರಕರ್ತರು ಉಗ್ರಗಾಮಿಗಳ ಬಗ್ಗೆ ಸಹಾನುಭೂತಿಯನ್ನು ಮತ್ತು ದೇಶವಿರೋಧಿ ಪ್ರೇರಣೆಯನ್ನು ಹೊಂದಿದ್ದಾರೆಂದು ಜಮ್ಮು-ಕಾಶ್ಮೀರ ಆಡಳಿತವು ಶಂಕಿಸಿದೆ ಎಂದು ತಿಳಿಸಿರುವ ವರದಿಯು,ಇದೇ ಕಾರಣದಿಂದ ಕೇಂದ್ರಾಡಳಿತ ಪ್ರದೇಶದ ಆಡಳಿತ ಮುಖ್ಯಸ್ಥರಾಗಿರುವ ಉಪ ರಾಜ್ಯಪಾಲ ಮನೋಜ್ ಸಿನ್ಹಾ ಅವರು ಆಯ್ದ ಆದ್ಯತೆಯ ಪತ್ರಕರ್ತರೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಹೇಳಿದೆ.

ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರ ದೂರಿನ ಮೇರೆಗೆ ಪಿಸಿಐ ಅಧ್ಯಕ್ಷ ನ್ಯಾ.ಸಿ.ಕೆ ಪ್ರಸಾದ ಅವರು ಸೆ.29ರಂದು ಸತ್ಯಶೋಧನಾ ತಂಡವನ್ನು ರಚಿಸಿದ್ದರು.
ಕಾಶ್ಮೀರದಲ್ಲಿಯ ಪತ್ರಕರ್ತರಿಗೆ ಅವರ ಕಾರ್ಯಗಳಿಗಾಗಿ ಭದ್ರತಾ ಪಡೆಗಳು ಮತ್ತು ಅಧಿಕಾರಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದ ಮುಫ್ತಿ,ಪತ್ರಕರ್ತರನ್ನು ಕಾನೂನುಬಾಹಿರವಾಗಿ ಪೊಲೀಸ್ ಠಾಣೆಗಳಿಗೆ ಕರೆಸುವುದು,ಅವರ ಮನೆಗಳಿಗೆ ದಾಳಿ ಮತ್ತು ಭಯೋತ್ಪಾದನೆ ನಿಗ್ರಹ ಕಾನೂನುಗಳಡಿ ಅವರ ವಿರುದ್ಧ ಪ್ರಕರಣ ದಾಖಲು ಸೇರಿದಂತೆ ಹಲವಾರು ವಿಷಯಗಳನ್ನು ಎತ್ತಿದ್ದರು.

ದೈನಿಕ ಭಾಸ್ಕರ್‌ನ ಸಮೂಹ ಸಂಪಾದಕ ಪ್ರಕಾಶ್ ದುಬೆ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಪತ್ರಕರ್ತ ಗುರ್ಬೀರ್ ಸಿಂಗ್ ಮತ್ತು ಜನಮೋರ್ಚಾದ ಸಂಪಾದಕಿ ಡಾ.ಸುಮನ್ ಗುಪ್ತಾ ಅವರು ಕಳೆದ ವರ್ಷದ ಅಕ್ಟೋಬರ್ ಮತ್ತು ನವಂಬರ್‌ ನಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿ ಕಾಶ್ಮೀರಿ ಪತ್ರಕರ್ತರು ಮತ್ತು ಸರಕಾರಿ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ್ದರು.

ಜಮ್ಮು-ಕಾಶ್ಮೀರದಲ್ಲಿಯ ಪತ್ರಕರ್ತರು ಎದುರಿಸುತ್ತಿರುವ ಒತ್ತಡ ಮತ್ತು ಮಾಧ್ಯಮ ಉದ್ಯಮದ ಸಂಕಷ್ಟಗಳನ್ನು ಗಣನೆಗೆ ತೆಗೆದುಕೊಂಡಿರುವ ಸತ್ಯಶೋಧನಾ ತಂಡವು,ಆಡಳಿತ ಮತ್ತು ಪತ್ರಕರ್ತರ ನಡುವಿನ ಸಂವಹನದ ಸಾಮಾನ್ಯ ರೀತಿಯು ಈ ಪ್ರದೇಶದಲ್ಲಿ ಅಸ್ತವ್ಯಸ್ತಗೊಂಡಿದೆ ಎಂದು ತನ್ನ ವರದಿಯಲ್ಲಿ ಒತ್ತಿ ಹೇಳಿದೆ.

ಪತ್ರಕರ್ತರು ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಸರಕಾರಿ ಸಂಸ್ಥೆಗಳು,ಪೊಲೀಸರು ಹಾಗೂ ಉಗ್ರಗಾಮಿಗಳಿಂದ ನಿರಂತರ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ ಇಂತಹ ದ್ವೇಷಪೂರ್ಣ ವಾತಾವರಣದಲ್ಲಿ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಶ್ಲಾಘಿಸಬೇಕು ಎಂದು ವರದಿಯು ಹೇಳಿದೆ.
ಸ್ಥಳೀಯ ಸುದ್ದಿಪತ್ರಿಕೆಗಳ ಜಾಹೀರಾತು ಆದಾಯ ಕುಸಿಯುತ್ತಿರುವುದನ್ನು ಬೆಟ್ಟು ಮಾಡಿರುವ ವರದಿಯು,ಮಾಧ್ಯಮ ಉದ್ಯಮದ ಉಳಿವು ಸಹ ಕಷ್ಟಕರವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News