ಕಳಸ: ಅತಿವೃಷ್ಟಿ ಸಂತ್ರಸ್ಥರಿಗೆ ನಿವೇಶನ ಹಂಚಿಕೆಗೆ ಒಪ್ಪಿದ ತಾಲೂಕು ಆಡಳಿತ; 11 ದಿನಗಳ ಧರಣಿ ಕೈಬಿಟ್ಟ ಸಂತ್ರಸ್ಥರು

Update: 2022-03-12 16:21 GMT

ಚಿಕ್ಕಮಗಳೂರು: ಕಳೆದ ಮೂರು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಜಿಲ್ಲಾಡಳಿತ ನಿವೇಶನ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲೆಯ ಕಳಸ ಪಟ್ಟಣದ ನಾಡಕಚೇರಿ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಧರಣಿ, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಸಂತ್ರಸ್ಥರಿಗೆ ತಾಲೂಕು ಆಡಳಿತ ನಿವೇಶನ ಹಕ್ಕುಪತ್ರ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ಥರು ಧರಣಿಯನ್ನು ಹಿಂಪಡೆದಿದ್ದಾರೆ.

ಕಳಸ ತಾಲೂಕು ವ್ಯಾಪ್ತಿಯ ಚೆನ್ನಡ್ಲು ಗ್ರಾಮ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳ ಹಿಂದೆ ಅತಿವೃಷ್ಟಿಯಿಂದಾಗಿ ಭೂ ಕುಸಿತ ಸಂಭವಿಸಿ 16 ಮನೆಗಳು ನೆಲಸಮಗೊಂಡಿದ್ದವು. ಈ ಮನೆಗಳ ಮಾಲಕರಿಗೆ ಜಿಲ್ಲಾಡಳಿತ ಪರ್ಯಾಯ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದು, ಅದರಂತೆ ಕಳಸ ತಾಲೂಕು ವ್ಯಾಪ್ತಿಯ ಕುಂಬಳಡಿಕೆ ಎಂಬಲ್ಲಿ ನಿವೇಶನ ಜಾಗವನ್ನೂ ಗುರುತಿಸಿತ್ತು.

ಆದರೆ ಸಂತ್ರಸ್ಥರಿಗೆ ನಿವೇಶನ ಕಲ್ಪಿಸಲು ಜಾಗ ಕಾಯ್ದಿರಿಸಿ 2 ವರ್ಷ ಕಳೆದರೂ ಜಿಲ್ಲಾಡಳಿತ ಸಂತ್ರಸ್ಥಿರಗೆ ನಿವೇಶನ ಹಾಗೂ ಹಕ್ಕುಪತ್ರ ನೀಡಿರಲಿಲ್ಲ. ಇದರಿಂದ ಬೇಸತ್ತ ಸಂತ್ರಸ್ಥರು ಮಾ.2ರಂದು ಕಳಸ ಪಟ್ಟಣದ ನಾಡಕಚೇರಿ ಎದುರು ವಿವಿಧ ರಾಜಕೀಯ ಪಕ್ಷ, ಸಂಘಟನೆಗಳ ಬೆಂಬಲದೊಂದಿಗೆ ಸಾಮಾಜಿಕ ಕಾರ್ಯಕರ್ತ ರವಿ ರೈ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದರು. ಸಂತ್ರಸ್ಥರ ಧರಣಿ ವಾರ ಕಳೆದರೂ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕ ಕುಮಾರಸ್ವಾಮಿ ನಿರ್ಲಕ್ಷ್ಯ ವಹಿಸಿದ್ದರಿಂದ ಸಂತ್ರಸ್ಥರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಲ್ಲದೇ ಧಯಾ ಮರಣಕ್ಕೂ ಆಗ್ರಹಿಸಿದ್ದರು. ಉಪವಾಸ ಕೈಗೊಂಡ ಸಂತ್ರಸ್ಥರ ಪೈಕಿ ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಯನ್ನೂ ಸೇರಿದ್ದರು.

ಸಂತ್ರಸ್ಥರ ಮನವೊಲಿಕೆಗೆ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರೂ ಧರಣಿನಿರತ ಸಂತ್ರಸ್ಥರು ನಿವೇಶನ ಹಕ್ಕುಪತ್ರ ಪಡೆಯದೇ ಧರಣಿ, ಉಪವಾಸ ಕೈಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಶುಕ್ರವಾರ ಎಲ್ಲ ಸಂತ್ರಸ್ಥರಿಗೂ ನಿವೇಶನ ಜಾಗ ಕಲ್ಪಿಸುವುದಾಗಿ ಭರವಸೆ ನೀಡಿದ್ದು, ಶನಿವಾರ ಮೂಡಿಗೆರೆ ಪಟ್ಟಣದಲ್ಲಿ ನಿವೇಶನಗಳ ಹಂಚಿಕೆಗೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಎಲ್ಲ ಸಂತ್ರಸ್ಥರೂ ಮೂಡಿಗೆರೆ ತಾಲೂಕು ಕಚೇರಿಗೆ ಆಗಮಿಸಬೇಕೆಂದು ಭರವಸೆ ನೀಡಿತ್ತು. ತಾಲೂಕು ಆಡಳಿತದ ಈ ಭರವಸೆ ಹಿನ್ನೆಲೆಯಲ್ಲಿ ಶುಕ್ರವಾರ ಸಂತ್ರಸ್ಥರು ಧರಣಿಯನ್ನು ಕೈಬಿಟ್ಟಿದ್ದರು.

ತಾಲೂಕು ಆಡಳಿತದ ಭರವಸೆಯಂತೆ ಶನಿವಾರ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ನಿವೇಶನಗಳ ಹಂಚಿಕೆ ಪ್ರಕ್ರಿಯೆ ನಡೆದಿದ್ದು, ಒಟ್ಟು 16 ಸಂತ್ರಸ್ಥರಿಗೆ ನಿವೇಶನ ಹಂಚಿಕೆ ಮಾಡಲಾಯಿತು ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News