ಮಡಿಕೇರಿ: ನಕ್ಷತ್ರ ಆಮೆ ಮಾರಾಟ ಯತ್ನ; ಇಬ್ಬರು ಆರೋಪಿಗಳ ಬಂಧನ
ಮಡಿಕೇರಿ: ಅಳಿವಿನಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕ ಬಂಧಿಸಿದೆ. ಅಪ್ರೋಜ್ ಪಾಷಾ ಮತ್ತು ಮನ್ಸೂರ್ ಎಂಬವರೇ ಬಂಧಿತ ಆರೋಪಿಗಳಾಗಿದ್ದು, 1 ನಕ್ಷತ್ರ ಆಮೆಯನ್ನು ರಕ್ಷಿಸಲಾಗಿದೆ.
ಆರೋಪಿಗಳು ಶುಕ್ರವಾರ ಸಂಜೆ ವೇಳೆ ನಗರದ ಚೈನ್ ಗೇಟ್ ಬಳಿ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಡಿಕೇರಿಯ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ಘಟಕಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಂದರ್ಭ ಆರೋಪಿಗಳು ಸೆರೆ ಸಿಕ್ಕಿದ್ದಾರೆ.
ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್‍ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಸಿ.ಯು. ಸವಿ, ಸಿಬ್ಬಂದಿಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಸ್ವಾಮಿ, ಮಂಜುನಾಥ್ ಅವರುಗಳು ಕಾರ್ಯಾಚರಣೆ ನಡೆಸಿದ್ದಾರೆ.