ಆತ್ಮಕಥನವಾದರೂ ಸಮಾಜ ಚಿಂತನೆಯನ್ನು ಸಾಂಕೇತಿಸುತ್ತದೆ: ಆರ್.ಎನ್.ಶೆಟ್ಟಿ

Update: 2022-03-12 17:27 GMT

ಬೆಂಗಳೂರು: ಎಂ.ವೀರಪ್ಪ ಮೊಯ್ಲಿ ಅವರು ಆತ್ಮಕಥನ ಬರೆದಿದ್ದರೂ ಅದು ಸಮಾಜ ಚಿಂತನೆಯನ್ನು ಸಾಂಕೇತಿಸುತ್ತದೆ. ಇತಿಹಾಸ ವಿದ್ಯಾರ್ಥಿಗಳಿಗೆ ದಾರಿಸೂಚಕವಾಗಿದೆ. ಸ್ವಾತಂತ್ರ್ಯೋತ್ತರ ಭಾರತದ ಅದರಲ್ಲೂ ಕರ್ನಾಟಕದ ಇತಿಹಾಸದ ಒಳಸುಳಿಗಳನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಆಕರ ಗ್ರಂಥವಾಗಲಿದೆ ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ಎನ್. ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. 

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಪ್ನ ಬುಕ್ ಹೌಸ್ ಸಂಸ್ಥೆಯು ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯ-ರಾಷ್ಟ್ರದ ಅಭಿವೃದ್ಧಿಯ ಚಿಂತನೆಗಳೇ ಈ ಕೃತಿಯ ಜೀವಾಳವಾಗಿದೆ. ಈ ಕೃತಿಯು ಪ್ರಜಾಪ್ರಭುತ್ವದ ಜೀವನಗಾಥೆ ಎಂದು ಅಭಿಪ್ರಾಯಪಟ್ಟರು.

ಕೃತಿ ಕುರಿತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜಕೀಯ ಮುತ್ಸದ್ದಿ ಹಾಗೂ ಸಾಹಿತಿ ಎಂ.ವೀರಪ್ಪ ಮೊಯ್ಲಿ ಅವರ ‘ನನ್ನ ಬೊಗಸೆಯ ಆಕಾಶ’ ಆತ್ಮಕಥನವು ಒಂದು ಆದರ್ಶ ಗ್ರಂಥವಾಗಿದೆ. ಸಂವೇದನಾಶೀಲರಾಗಿಯೂ ತಮ್ಮ ವ್ಯಕ್ತಿತ್ವದ ಛಾಪು ಮೂಡಿಸಿರುವ ಮೊಯ್ಲಿ ಅವರು, ಸಮಾಜ ಸುಧಾರಣೆಯ ಚಿಂತಕರೂ ಹೌದು. ಸಮಾಜ ಪರಿವರ್ತನೆಗೆ ಬುನಾದಿ ಎನ್ನಬಹುದಾದ ಶಿಕ್ಷಣ ಕ್ಷೇತ್ರವನ್ನು ಅವರು ಅತಿಯಾಗಿ ಪ್ರೀತಿಸುತ್ತಾರೆ. ಶಿಕ್ಷಣ ಸಚಿವರಾಗಿ ಅವರು ಜಾರಿಗೊಳಿಸಿದ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಖ್ಯಾತ ವಿಮರ್ಶಕ ಪ್ರೊ.ಸಿ.ಎನ್. ರಾಮಚಂದ್ರನ್ ಮಾತನಾಡಿ, ವ್ಯಕ್ತಿಗತ ಜೀವನ, ರಾಜಕೀಯ ಹಾಗೂ ಸಾಹಿತ್ಯ ಹೀಗೆ ಮೂರು ವಿಭಿನ್ನ ಆಯಾಮಗಳಿದ್ದರೂ ಕೃತಿಯು ಒಟ್ಟಾಗಿ ಒಂದೇ ಆಶಯವನ್ನು ಒಳಗೊಂಡಿದೆ. ಅಲಕ್ಷಿತ ಸಮುದಾಯದವರ ಕುರಿತು ಕಾಳಜಿ ವ್ಯಕ್ತವಾಗಿದೆ ಎಂದರು.

ಕೇಂದ್ರ ಸಚಿವ ರೆಹಮಾನ್ ಖಾನ್ ಅವರು ಮಾತನಾಡಿ ಎಂ.ವೀರಪ್ಪ ಮೊಯಿಲಿ ಅವರ ವ್ಯಕ್ತಿತ್ವವು ಅನುಕರಣೀಯ. ಸಾಹಿತ್ಯ, ರಾಜಕೀಯ ವಲಯದಲ್ಲೂ ಯಶಸ್ವಿ ಕಂಡ ನಾಯಕರು ಎಂದು ಶ್ಲಾಘಿಸಿದರು. 

ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ ಮಾತನಾಡಿ, ರಾಜಕಾರಣಿಗಳು ಅಂಗೈಯಲ್ಲಿ ಆಕಾಶ ತೋರಿಸುವವರು ಎಂಬ ವ್ಯಂಗ್ಯವಿದೆ. ಸಾಹಿತಿಗಳಿಗೂ ಈ ಮಾತು ಇತ್ತೀಚೆಗೆ ಅನ್ವಯವಾಗುತ್ತದೆ. ಆದರೆ, ಎಂ.ವೀರಪ್ಪ ಮೊಯ್ಲಿ ಅವರ ಆತ್ಮಕಥನ ‘ನನ್ನ ಬೊಗಸೆಯ ಆಕಾಶ’ ಕೃತಿಯು ಆತ್ಮಾವಲೋಕನದ ಉತ್ತಮ ಕೃತಿಯಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್, ಡಾ. ಕೆ.ಆರ್. ಕಮಲೇಶ್, ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಇತರರು ಉಪಸ್ಥಿತರಿದ್ದರು. 

ಈ ಗ್ರಂಥವು ಕೇವಲ ನನ್ನದು ಮಾತ್ರವಲ್ಲ, ಅದು ಮಾಲತಿಯವರ ಆತ್ಮಕಥನವೂ ಆಗಿದೆ. ಬರೆಯುವ ಹುಚ್ಚುತನ ಕಿಡಿಯನ್ನು ಆರದಂತೆ ಬದುಕಿನುದ್ದಕ್ಕೂ ಉಳಿಸಿಕೊಂಡು ಬಂದಿದ್ದರ ಫಲವಾಗಿ ಆತ್ಮಕಥನವು ಮೂಡಿಬಂದಿದೆ. ಪ್ರಶಸ್ತಿಗಾಗಿ ನಾನು ಬರೆಯುವುದಿಲ್ಲ. ಬದುಕಿನ ಸಂತೃಪ್ತಿಗಾಗಿ ಬರೆದೆ.
-ಎಂ.ವೀರಪ್ಪ ಮೊಯ್ಲಿ, ಗ್ರಂಥಕರ್ತ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News