ತಂದೆಯ ಹತ್ಯೆಗೈದ ಮಾನಸಿಕ ಅಸ್ವಸ್ಥನಿಗೆ ಹೈಕೋರ್ಟ್‍ನಿಂದ ಜಾಮೀನು
ಬೆಂಗಳೂರು, ಮಾ. 13: ಬೆಲ್ಟ್‍ನಿಂದ ಹಲ್ಲೆ ನಡೆಸಿ, ಮೈಮೇಲೆ ಕುದಿಯುವ ನೀರು ಸುರಿದು ತಂದೆಯನ್ನೇ ಕೊಲೆ ಮಾಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾನಸಿಕ ಅಸ್ವಸ್ಥನೊಬ್ಬನಿಗೆ ಚಿಕಿತ್ಸೆ ಕೊಡಿಸುವ ಉದ್ದೇಶಕ್ಕಾಗೀ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಮುಂಬೈ ಮೂಲದ ಮನಾಂಕ್ ಮುದಲಿಯಾರ್(28) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಮಾನ್ಯ ಮಾಡಿದೆ. ಮಾನಸಿಕ ಅಸ್ವಸ್ಥ ಎನ್ನಲಾಗಿರುವ ಆರೋಪಿಗೆ ಸೂಕ್ತ ಚಿಕಿತ್ಸೆ ಕೊಡಿಸದಿದ್ದರೆ, ಆತನ ವಿರುದ್ಧದ ಆರೋಪಗಳ ವಿಚಾರಣೆ ನಡೆಸುವುದು ಕಷ್ಟವಾಗಲಿದೆ. ಹೀಗಾಗಿ, ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಆದೇಶವೇನು: ಆರೋಪಿಯು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ದೂರುದಾರರಾದ ಮೃತರ ಸಹೋದರ ಸಹ ಆರೋಪಿಗೆ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ತಂದೆಯೇ ಆತನನ್ನು ಬೆಂಗಳೂರಿಗೆ ಕರೆತಂದಿದ್ದರು ಎಂದು ತಿಳಿಸಿದ್ದಾರೆ.
2021ರ ಎ.16ರಿಂದ ಮೇ 6ರ ವರೆಗೆ ಆರೋಪಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಅಧಿಕ ಸಮಯದಿಂದ ಜೈಲಿನಲ್ಲಿದ್ದಾನೆ. ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿರುವುದರಿಂದ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.