ಬಿಎಸ್ ವೈಗೆ ವಯಸ್ಸಾಗಿದೆ, ಅವರು ಇನ್ನು ಮೇಲೆ ಆರಾಮಾಗಿರಬೇಕು: ಬಿಜೆಪಿ ಶಾಸಕ ಯತ್ನಾಳ್

Update: 2022-03-13 14:31 GMT

ವಿಜಯಪುರ, ಮಾ. 13: ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರು ಬಹಳ ಹಿರಿಯರು, ಅವರು ಇನ್ನು ಮುಂದೆ ವಿಶ್ರಾಂತಿ ಪಡೆಯಲಿ. ಎರಡನೆ ಹಂತದ ನಾಯಕರು ಮುಂದೆ ಬಂದಿದ್ದಾರೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿವಾರ ನಗರದ ಹೊರವಲಯದ ತೊರವಿ ತಾಂಡಾದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದಿತ್ತು. ಇದೀಗ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಅವಧಿ ಇರುವ ಕಾರಣ ನಿಶ್ಚಿತವಾಗಿಯೂ ಸಚಿವ ಸಂಪುಟ ವಿಸ್ತರಣೆ, ಇಲ್ಲವೆ ಪುನಾರಚನೆ ನಡೆಯಲಿದೆ. ಹಿರಿಯ ನಾಯಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬಹುದು' ಎಂದು ಯತ್ನಾಳ್ ಇದೇ ವೇಳೆ ನುಡಿದರು.

ನೈತಿಕತೆ ಇಲ್ಲ: ‘ಬಿಜೆಪಿಯನ್ನು ಬ್ರೋಕರ್ ಗಳ ಪಕ್ಷ ಎನ್ನುವ ನೈತಿಕತೆ ಕಾಂಗ್ರೆಸ್‍ನವರಿಗಿಲ್ಲ. ಜೈಲಿಗೆ ಹೋಗಿ ಬಂದವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲ. ಬಿಪಿ, ಶುಗರ್ ಎಂದೇಳಿ ಜೈಲಿನಿಂದ ಜಾಮೀನು ಪಡೆದುಕೊಂಡು ಬಂದವರಿಗೆ ಈಗ ಮೇಕೆದಾಟು ಪಾದಯಾತ್ರೆ ಮಾಡಲು ಶಕ್ತಿ ಹೇಗೆ ಬಂತು?' ಎಂದು ಯತ್ನಾಳ್ ಇದೇ ವೇಳೆ ಪ್ರಶ್ನಿಸಿದರು.

‘ಯಾರಾದರೂ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಿದರೆ ಡಿಕೆಶಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಪಂಚ ರಾಜ್ಯ ಚುನಾವಣೆಯಲ್ಲಿ 4ರಾಜ್ಯವನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಸಹಜವಾಗಿ ಕರ್ನಾಟಕ ರಾಜ್ಯದಲ್ಲಿಯೂ ಅವಧಿಗೆ ಮುನ್ನ ಚುನಾವಣೆ ಬಗ್ಗೆ ಎಂಬ ಗುಸುಗುಸು ನಡೆದಿದೆ. ಇನ್ನೂ ಒಂದು ವರ್ಷ ಇರುವ ಕಾರಣ ಗುಜರಾತ್ ಜೊತೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ' ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News